ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಬಹಳ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕೇವಲ ರಾಜಕೀಯದ ಕಾರಣಕ್ಕೆ ಕೆಲವರು ಟೀಕೆ-ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ. ಆದರೆ ನಾವು ಅದಕ್ಕೆ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಳ್ಳದೆ ದೇವರ ಹಣದಲ್ಲಿ ಒಂದು ರೂಪಾಯಿ ಕೂಡ ಲೋಪವಾಗದಂತೆ ಅಭಿವೃದ್ಧಿ ಕಾರ್ಯವನ್ನು ಮಾಡಿ ತೋರಿಸಲಿದ್ದೇವೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಅವರು ಪುತ್ತೂರಿನಲ್ಲಿ ಪತ್ರಕರ್ತರ ಜತೆ ಮಾತನಾಡಿ, ದೇವಸ್ಥಾನವು ಅಭಿವೃದ್ಧಿಯಾದರೆ ಮುಂದಿನ ಚುನಾವಣೆಯ ಸಂದರ್ಭ ನಮ್ಮ ಕುತಂತ್ರಗಳು ನಡೆಯುವುದಕ್ಕೆ ಸಾಧ್ಯವಿಲ್ಲ ಎಂಬ ಕಾರಣದಿಂದ ರಾಜಕೀಯ ಲಾಭ ಪಡೆಯುವ ಉದ್ದೇಶದಿಂದ ಇಂತಹ ಗೊಂದಲ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದು, ಹಣಕಾಸಿನ ವಿಚಾರದ ಆರೋಪಗಳಿಗೆ ಸಂಬಂಧಿಸಿ ಮುಜರಾಯಿ ಇಲಾಖೆಯ ಅಧಿಕಾರಿಗಳು ದೂರುದಾರರ ಹೇಳಿಕೆ ಪಡೆಯುವ ಕಾರ್ಯ ಮಾಡಿದ್ದಾರೆ. ನಾವು ಅಧಿಕಾರಿಗಳ ಬಳಿ ಕೇಳಿದಾಗ ನಮಗೆ ಯಾವುದೇ ಲೋಪ ಕಂಡುಬಂದಿಲ್ಲ ಎಂಬುದನ್ನು ಮೌಖಿಕವಾಗಿ ತಿಳಿಸಿದ್ದಾರೆ. ಮುಂದೆ ಅದರ ಕುರಿತು ವರದಿ ನೀಡಲಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಕಾಣಿಕೆಯ ಹಣವನ್ನು ಬಳಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಅಭಿವೃದ್ಧಿಗೆ ವಾಗ್ದಾನ ನೀಡಿದ ಭಕ್ತರ ಹಣ ಹಾಗೂ ಸರಕಾರ ಅನುದಾನವನ್ನು ಬಳಸಿಕೊಂಡು ಅಭಿವೃದ್ಧಿ ಕಾರ್ಯ ನಡೆಯಲಿದೆ. ಅಭಿವೃದ್ಧಿ ಕಾರ್ಯಗಳು ಹಿಂದೆಯೂ ನಡೆದಿದ್ದು, ನಾವು ಯಾವುದೇ ಲೆಕ್ಕಪತ್ರವನ್ನು ಕೇಳಿಲ್ಲ, ಜತೆಗೆ ಭ್ರಷ್ಟಾಚಾರ ಆಗಿದೆ ಆರೋಪವನ್ನೂ ನಾವು ಮಾಡುತ್ತಿಲ್ಲ.
ದೇವಸ್ಥಾನದ ಸುಪರ್ದಿಯಲ್ಲೇ ರಸ್ತೆ ನಿರ್ಮಾಣವಾಗುತ್ತಿದ್ದು, ಅದಕ್ಕಾಗಿ 30 ಸೆಂಟ್ಸ್ ಜಾಗ ಬಳಕೆಯಾಗುತ್ತದೆ. ರಸ್ತೆ ದೇವಸ್ಥಾನದ ಹೆಸರಲ್ಲೇ ಇರುತ್ತದೆ. ರಸ್ತೆಗೆ ಮೊದಲ ನಗರಸಭೆಯ ಅನುದಾನದಲ್ಲಿ ಒಳಚರಂಡಿಯ ಪೈಪುಲೈನ್ ಕಾಮಗಾರಿ ನಡೆಯಬೇಕಿರುವುದರಿಂದ ಕಾಮಗಾರಿ ಕೊಂಚ ತಡವಾಗಿದೆ. ೩.೫೦ ಕೋ.ರೂ. ವೆಚ್ಚದಲ್ಲಿ ಕೆರೆಯ ಕಾಮಗಾರಿ ನಡೆಯಲಿದ್ದು, 15 ದಿನಗಳಲ್ಲಿ ಅದು ಆರಂಭಗೊಳ್ಳಲಿದೆ.
ದೇವಸ್ಥಾನದ ಗ್ರಾನೈಟ್ ವ್ಯವಸ್ಥೆಗೆ 4 ಕೋ.ರೂ.ಬೇಕಿದ್ದು, ಅದಕ್ಕಾಗಿ ಬೆಂಗಳೂರಿನಲ್ಲಿ ಸಭೆಯನ್ನೂ ಮಾಡಲಿದ್ದೇವೆ. 45 ಲಕ್ಷ ರೂ.ವೆಚ್ಚದಲ್ಲಿ ಶಾಶ್ವತ ಲೈಟಿಂಗ್ ವ್ಯವಸ್ಥೆಯೂ ಆಗಲಿದೆ. ನೆಲ್ಲಿಕಟ್ಟೆಯಲ್ಲಿ 20 ಕೋ.ರೂ.ವೆಚ್ಚದಲ್ಲಿ ದೇವಸ್ಥಾನದ ವಾಣಿಜ್ಯ ಸಂಕೀರ್ಣ, ವಸತಿ ಗೃಹ ನಿರ್ಮಾಣವಾಗಲಿದ್ದು, ಅದಕ್ಕೆ 10 ಕೋ.ರೂ. ಶಾಸಕರ ಅನುದಾನ, 5 ಕೋ.ರೂ.ಸಿಎಂ ವಿಶೇಷ ಅನುದಾನ ಬಳಕೆ ಮಾಡುತ್ತೇವೆ. 15 ಕೋ.ರೂ.ವೆಚ್ಚದಲ್ಲಿ ಸಭಾಭವನ ಕೂಡ ನಿರ್ಮಾಣವಾಗಲಿದೆ.


50-100 ಕೋ.ರೂ.ನಷ್ಟು ಮೌಲ್ಯದ ದೇವಸ್ಥಾನದ ಆಸ್ತಿಯನ್ನು ಕೆಲವರು ಒಳಗೆ ಹಾಕಿದ್ದು, ಈಗಾಗಲೇ 40 ಕೋ.ರೂ.ಮೌಲ್ಯದ ಜಾಗಗಳನ್ನು ಗುರುತು ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲಾ ಜಾಗಗಳನ್ನು ಸ್ವಾಧೀನ ಪಡೆಸಿಕೊಳ್ಳುವ ಕಾರ್ಯ ಮಾಡುತ್ತೇವೆ. ದೇವಸ್ಥಾನದ ಕುರಿತು ಕೆಲವರು ದೂರು ನೀಡುವ ಕಾರ್ಯ ಮಾಡಿದ್ದು, ಇಲಾಖೆಯ ನಿಯಮದ ಪ್ರಕಾರ ಹಿಂದುಯೇತರರಿಗೆ ದೂರು ನೀಡುವ ಅವಕಾಶವೇ ಇಲ್ಲ.
ಪುತ್ತೂರು ನಗರದ ಸಮಗ್ರ ಒಳಚರಂಡಿ ವ್ಯವಸ್ಥೆಗಾಗಿ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅದರ ಎಸ್ ಟಿಪಿ ಘಟಕ ಬೆದ್ರಾಳದಲ್ಲಿ ನಿಗದಿ ಪಡೆಸಿದ ಜಾಗದಲ್ಲಿ ಅನುಷ್ಠಾನಗೊಳ್ಳಲಿದೆ. ಜಿ.ಪಂ.-ತಾ.ಪಂ.ಚುನಾವಣೆಗೂ ಮುನ್ನಾ ಮೆಡಿಕಲ್ ಕಾಲೇಜಿಗೆ ಶಿಲಾನ್ಯಾಸ ನಡೆಸುವ ಯೋಚನೆ ಇದೆ ಎಂದರು.

