ವಿಟ್ಲ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಹೋದರನ ಮಗಳೇ ಚಿಕ್ಕಪ್ಪನನ್ನು ಹರಿತವಾದ ಸಾಧನದಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ. ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (50) ಕೊಲೆಯಾದ ದುರ್ದೈವಿ.


ಮಂಗಳವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ಚೆನ್ನಯ್ಯ ಪೂಜಾರಿ ಅವರು ತಮ್ಮ ಸಹೋದರನ ಮಗಳು ವಾಸವಿದ್ದ ಮನೆಯ ಬಳಿ ಬಂದು ಗಲಾಟೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿದೆ. ಆಕ್ರೋಶಗೊಂಡ ಸಹೋದರನ ಮಗಳು ಮನೆಯಲ್ಲಿದ್ದ ಹರಿತವಾದ ಸಾಧನದಿಂದ ಚೆನ್ನಯ್ಯ ಪೂಜಾರಿ ಅವರಿಗೆ ಚುಚ್ಚಿದ್ದಾಳೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಚೆನ್ನಯ್ಯ ಪೂಜಾರಿ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ದೂರು ಸ್ವೀಕರಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.




