ಕಾಸರಗೋಡು: ಅಪ್ರಾಪ್ತ ಬಾಲಕಿಯರನ್ನು ಉಳ್ಳಾಲದ ಲಾಡ್ಜ್‌ಗೆ ಕರೆತಂದ ಮಂಜೇಶ್ವರದ ಇಬ್ಬರು ಯುವಕರು ಅರೆಸ್ಟ್..!

Prakhara News
1 Min Read

ಕಾಸರಗೋಡು : ಸ್ನ್ಯಾಪ್‌ಚಾಟ್ (Snapchat) ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು, 14 ಹಾಗೂ 16 ವರ್ಷದ ಇಬ್ಬರು ಶಾಲಾ ಬಾಲಕಿಯರನ್ನು ಮಂಗಳೂರು ಸಮೀಪದ ಉಳ್ಳಾಲದ ಲಾಡ್ಜ್‌ಗೆ ಕರೆದೊಯ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.

ಮಂಜೇಶ್ವರ ಮೂಲದ ರಿಜ್ವಾನ್ (23) ಹಾಗೂ ಮುಹಮ್ಮದ್ ಸಾದ್ (19) ಬಂಧಿತ ಆರೋಪಿಗಳು. ಇವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ – POCSO) ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಮಾಹಿತಿಯಂತೆ, ಘಟನೆ ನಡೆಯುವ ಮೂರು ದಿನಗಳಷ್ಟೇ ಮುಂಚೆ ಬಾಲಕಿಯರಿಗೆ ಸ್ನ್ಯಾಪ್‌ಚಾಟ್‌ನಲ್ಲಿ ಆರೋಪಿಗಳ ಪರಿಚಯವಾಗಿತ್ತು. ಆಗಸ್ಟ್ 16 ರ ಭಾನುವಾರ ಇಬ್ಬರು ಆರೋಪಿಗಳು ಕಾರಿನಲ್ಲಿ ಕಾಂಞಂಗಾಡ್‌ಗೆ ಬಂದು, ಮನೆ ಸಮೀಪದಿಂದಲೇ ಬಾಲಕಿಯರನ್ನು ಕರೆದುಕೊಂಡು ಹೋಗಿದ್ದರು. ಬಾಲಕಿಯರು ತಮ್ಮ ಸ್ನೇಹಿತರನ್ನು ಭೇಟಿಯಾಗಲು ಹೋಗುವುದಾಗಿ ಮನೆಯಲ್ಲಿ ತಿಳಿಸಿದ್ದರು.

ಸಂಜೆಯಾದರೂ ಬಾಲಕಿಯರು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಪೋಷಕರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬಾಲಕಿಯರ ಮೊಬೈಲ್ ಫೋನ್ ಟವರ್ ಲೊಕೇಶನ್ ಆಧರಿಸಿ ತನಿಖೆ ನಡೆಸಿದಾಗ, ಅವರು ಕರ್ನಾಟಕ-ಕೇರಳ ಗಡಿ ಭಾಗದ ಉಳ್ಳಾಲಕ್ಕೆ ತೆರಳಿರುವುದು ಪತ್ತೆಯಾಗಿದೆ.
ಉಳ್ಳಾಲದ ಲಾಡ್ಜ್‌ಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಾಲಕಿಯರು ನೀಡಿರುವ ಹೇಳಿಕೆಯನ್ನಾಧರಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Share This Article
Leave a Comment