ಉಡುಪಿ: ನಿಲ್ಲಿಸಿದ್ದ ಬಸ್ ನ್ನ ಕದ್ದು ಪರಾರಿಯಾಗಿದ್ದ ಕಳ್ಳರು-ಕೆಲವೇ ಗಂಟೆಗಳಲ್ಲಿ ಬಸ್ ಪತ್ತೆ ಹಚ್ಚಿದ ಪೊಲೀಸರು..!

Prakhara News
1 Min Read

ಉಡುಪಿ: ನಗರದ ಚಿತ್ಪಾಡಿಯ ಹನುಮಾನ್ ಗ್ಯಾರೇಜ್ ಹಿಂಭಾಗದಲ್ಲಿ ನಿಲ್ಲಿಸಲಾಗಿದ್ದ ಸುಮಾರು ಖಾಸಗಿ ಬಸ್ಸನ್ನು ಕದ್ದೊಯ್ದಿದ್ದ ಪ್ರಕರಣವನ್ನು ಉಡುಪಿ ನಗರ ಠಾಣೆಯ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಭೇದಿಸಿದ್ದಾರೆ. ಕಳವಾಗಿದ್ದ ಬಸ್ಸನ್ನು ಮುದರಂಗಡಿ ಸಮೀಪದ ಮುದ್ದಾಡಿ ಎಂಬಲ್ಲಿ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕುಂದಾಪುರದ ಕಟ್‌ಬೆಲ್ತೂರು ನಿವಾಸಿ ಕೃಷ್ಣ (51) ಎಂಬವರು ಈ ಖಾಸಗಿ ಬಸ್ಸಿನಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್ 28ರ ರಾತ್ರಿ ಸುಮಾರು 9:48ರ ವೇಳೆಗೆ ಬಸ್ ಚಾಲಕ ರಾಹೀಜ್ ಉಚ್ಚಿಲ ಅವರೊಂದಿಗೆ ಬಸ್ಸನ್ನು ಚಿತ್ಪಾಡಿಯ ಹನುಮಾನ್ ಪೆಟ್ರೋಲ್ ಬಂಕ್ ಹಿಂಭಾಗದ ಗ್ಯಾರೇಜ್ ಬಳಿ ನಿಲ್ಲಿಸಿ, ರಾತ್ರಿ 10 ಗಂಟೆಗೆ ಇಬ್ಬರೂ ಮನೆಗೆ ತೆರಳಿದ್ದರು. ಮರುದಿನ ಬೆಳಿಗ್ಗೆ (ಸೆಪ್ಟೆಂಬರ್ 29) ಕರ್ತವ್ಯಕ್ಕೆ ಹಾಜರಾಗಲು ಸ್ಥಳಕ್ಕೆ ಬಂದಾಗ ಅಲ್ಲಿ ನಿಲ್ಲಿಸಲಾಗಿದ್ದ ಬಸ್ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬಸ್ ನಿರ್ವಾಹಕ ಕೃಷ್ಣ ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ನಗರ ಠಾಣೆಯ ಪೊಲೀಸರು ತಕ್ಷಣವೇ ತನಿಖೆ ಚುರುಕುಗೊಳಿಸಿದರು. ತನಿಖೆಯ ವೇಳೆ ಸೆಪ್ಟೆಂಬರ್ 29ರ ಮುಂಜಾನೆ ಸುಮಾರು 2 ಗಂಟೆಯ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬಸ್ಸನ್ನು ಕದ್ದೊಯ್ದಿರುವುದು ಪತ್ತೆಯಾಗಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಬಸ್ ತೆರಳಿದ ಮಾರ್ಗವನ್ನು ಬೆನ್ನಟ್ಟಿ, ಮುದರಂಗಡಿ ಸಮೀಪದ ಮುದ್ದಾಡಿ ಎಂಬ ಹಾಡಿಯಲ್ಲಿ ನಿಲ್ಲಿಸಲಾಗಿದ್ದ ಬಸ್ಸನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ಉಡುಪಿ ನಗರ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Share This Article
Leave a Comment