ಬ್ರಹ್ಮಾವರ : ಸ್ಥಳೀಯ ಬಸ್ ನಿಲ್ದಾಣದಿಂದ ಅಪ್ರಾಪ್ತ ಬಾಲಕನೋರ್ವನನ್ನು ಅಪಹರಿಸಿ, ಕೇರಳದ ತಲಪಾಡಿ ಕುಂಜತ್ತೂರು ಪದವಿನಲ್ಲಿರುವ ವುಡ್ ಕಂಪೆನಿಯೊಂದರಲ್ಲಿ ಬಲವಂತವಾಗಿ ಕೆಲಸಕ್ಕೆ ಸೇರಿಸಿ, ಹಲ್ಲೆ ಹಾಗೂ ಜೀವ ಬೆದರಿಕೆ ಒಡ್ಡಿದ್ದ ಭೀಕರ ಪ್ರಕರಣವನ್ನು ಬ್ರಹ್ಮಾವರ ಪೊಲೀಸರು ಭೇದಿಸಿದ್ದಾರೆ. ಕೃತ್ಯ ಎಸಗಿದ ಇಬ್ಬರು ಪ್ರಮುಖ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದ್ದು, ಮತ್ತೊಬ್ಬ ಬಾಲಾಪರಾಧಿಯನ್ನು ವಶಕ್ಕೆ ಪಡೆಯಲಾಗಿದೆ.


ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ಸಾಲಿಕೇರಿ ನಿವಾಸಿ ವಿಖ್ಯಾತ್ ಆಚಾರ್ಯ (19) ಹಾಗೂ ಮಟಪಾಡಿ ಗ್ರಾಮದ ನಿವಾಸಿ ಸುಚಿತ್ ನಾಯಕ್ (20) ಬಂಧಿತ ಆರೋಪಿಗಳಾಗಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮೂರನೇ ಆರೋಪಿಯು ಅಪ್ರಾಪ್ತನಾಗಿದ್ದರಿಂದ ಆತನನ್ನು ಬಾಲ ನ್ಯಾಯಮಂಡಳಿ (JJB) ಮುಂದೆ ಹಾಜರುಪಡಿಸಲಾಗಿದೆ.

ಜೂನ್ 1ರಂದು ಬೆಳಿಗ್ಗೆ 8:30ರ ಸುಮಾರಿಗೆ ಬ್ರಹ್ಮಾವರ ಬಸ್ ನಿಲ್ದಾಣದಲ್ಲಿದ್ದ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತ ಬಾಲಕನನ್ನು ಆರೋಪಿಗಳು ಬಲವಂತವಾಗಿ ಅಪಹರಿಸಿಕೊಂಡು ಕೇರಳ ರಾಜ್ಯದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿನ ವುಡ್ ಕಂಪೆನಿಗೆ ಕರೆದುಕೊಂಡು ಹೋಗಿ ಕೆಲಸಕ್ಕೆ ಸೇರಿಸಿದ್ದರು. ತನಗೆ ಈ ಕೆಲಸ ಬೇಡ, ಮನೆಗೆ ಹೋಗುತ್ತೇನೆ ಎಂದು ಬಾಲಕ ಹೇಳಿದ್ದಕ್ಕೆ ಕೋಪಗೊಂಡ ಆರೋಪಿಗಳು ಜೂನ್ 9ರಂದು ಮಧ್ಯಾಹ್ನ 1:30 ಗಂಟೆಗೆ ತಾವು ವಾಸವಿದ್ದ ಕೋಣೆಯಲ್ಲಿ ಆತನನ್ನು ಬಂಧಿಸಿಟ್ಟಿದ್ದಾರೆ. ಆರೋಪಿ ಸುಚಿತ್ ನಾಯಕ್ ವಿದ್ಯುತ್ ವಯರ್ನಿಂದ ಬಾಲಕನಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದರೆ, ಮತ್ತೊಬ್ಬ ಆರೋಪಿ ವಿಖ್ಯಾತ್ ಆಚಾರ್ಯ ಚೂರಿ ತೋರಿಸಿ, “ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಕೊಲೆ ಮಾಡುತ್ತೇವೆ” ಎಂದು ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೆ ಬಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಈ ಇಡೀ ಕ್ರೌರ್ಯವನ್ನು ಮತ್ತೊಬ್ಬ ಬಾಲಾಪರಾಧಿ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದ ಎನ್ನಲಾಗಿದೆ.

ಮಗ ನಾಪತ್ತೆಯಾದ ಹಾಗೂ ದೌರ್ಜನ್ಯಕ್ಕೊಳಗಾದ ಬಗ್ಗೆ ಬಾಲಕನ ಪೋಷಕರು ಬ್ರಹ್ಮಾವರ ಠಾಣೆಗೆ ನೀಡಿರುವ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS 2023)ಯ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಸೆಕ್ಷನ್ಗಳಾದ 137(2), 115(2), 352, 351(3) ರ ಜೊತೆಗೆ ಮಕ್ಕಳ ರಕ್ಷಣಾ ಕಾಯ್ದೆ (75 JJ ACT) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ (SC/ST Act) ಅಡಿಯಲ್ಲಿ ಗಂಭೀರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.



