ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಾಕ್ಷಿ ನುಡಿಯದಂತೆ ಬೆದರಿಕೆ ಆರೋಪ; ಮೂವರು ಆರೋಪಿಗಳ ಬಂಧನ

Prakhara News
1 Min Read

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಸಾಕ್ಷಿ ತಿರುಚಿ ಹೇಳುವಂತೆ ಬೆದರಿಕೆವೊಡ್ಡಿದ್ದ ಆರೋಪದಡಿ ಮೂವರು ಆರೋಪಿಗಳನ್ನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ ಐವರನ್ನ ಪೊಲೀಸ್ ಕಸ್ಡಡಿಗೆ ಪಡೆದಿದ್ದಾರೆ.

ಪ್ರಕರಣದ 49ನೇ ಸಾಕ್ಷಿದಾರ ಸಂದೀಪ್​ಗೆ ದರ್ಶನ್ ಅಭಿಮಾನಿಗಳು ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಸಂದೀಪ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದರು. ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಬಳಿಕ ಸಂದೀಪ್‌ಗೆ ರಕ್ಷಣೆ ನೀಡಿದ ಪೊಲೀಸರು, ಬೆದರಿಕೆ ಹಾಕಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.

ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ವೇಣು, ಸುಹಾಸ್ ಮತ್ತು ಪುನೀತ್ ಎಂಬುವರನ್ನ ಬಂಧಿಸಲಾಗಿದೆ. ಬಂಧಿತರಲ್ಲಿ ಪುನೀತ್, ‘ಡಿ ಕಂಪನಿ’ ಫ್ಯಾನ್ ಪೇಜ್ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಸುಹಾಸ್ ಮತ್ತು ವೇಣು ತುಮಕೂರಿನ ದರ್ಶನ್ ಅಭಿಮಾನಿ ಸಂಘದ ಸದಸ್ಯರಾಗಿದ್ದಾರೆ.

ಸುಹಾಸ್, ಸಾಕ್ಷಿದಾರ ಸಂದೀಪ್​​ನ ಮಾತುಕತೆ ನಡೆಸುವ ನೆಪದಲ್ಲಿ ಕರೆಸಿಕೊಂಡು, ಕಾರಿನಲ್ಲಿ ಸುತ್ತಾಡಿಸಿಕೊಂಡು ಸಾಕ್ಷಿ ಹೇಳದಂತೆ ತಾಕೀತು ಮಾಡಿದ್ದಾನೆ. ಇದಕ್ಕೆ ಒಪ್ಪದ ಸಂದೀಪ್‌ಗೆ ಸುಹಾಸ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಸದ್ಯ ಬಂಧಿತ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment