ಮಧುರೈ: ನೂತನ ತನಿಷ್ಕ್ ಶೋರೂಂ ನಿಂದ 15 ಕೋಟಿ ಚಿನ್ನಾಭರಣ ಕಳ್ಳತನ ಪ್ರಕರಣ; ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಯುವತಿ ಅರೆಸ್ಟ್ 6 ಕೆ.ಜಿ. ಚಿನ್ನ ವಶ

Prakhara News
3 Min Read

ಮಧುರೈ: ಹೊಸದಾಗಿ ಆರಂಭವಾಗಿದ್ದ ತನಿಷ್ಕ್ ಚಿನ್ನಾಭರಣ ಶೋರೂಂನಲ್ಲಿ ನಡೆದಿದ್ದ ಭಾರಿ ಕಳ್ಳತನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮಧುರೈ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು 6 ಕೆ.ಜಿ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಪ್ರಮುಖ ಶಂಕಿತ ಆರೋಪಿ, ಯೂಟ್ಯೂಬರ್ ಹಾಗೂ ಬೈಕ್-ಟ್ಯಾಕ್ಸಿ ಚಾಲಕನಾಗಿರುವ ನಿಶಾಂತ್ (25) ತಲೆಮರೆಸಿಕೊಂಡಿದ್ದು, ಆತನ ತಂದೆ ಸುರೇಶ್ ಮತ್ತು ನಿಶಾಂತ್‌ನ ಆಪ್ತ ಸ್ನೇಹಿತೆ, ಇನ್‌ಸ್ಟಾಗ್ರಾಮ್ ಪ್ರಭಾವಿ (ಇನ್‌ಫ್ಲುಯೆನ್ಸರ್) ಮೀನಾಕ್ಷಿ ಬಂಧಿತ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅರುತ್‌ಪೆರುಮ್ ಜ್ಯೋತಿ ನಗರದ ನಿವಾಸಿಯಾದ ನಿಶಾಂತ್, ಕಳ್ಳತನದ ಬಳಿಕ ಕೃತ್ಯಕ್ಕೆ ಬಳಸಿದ್ದ ಬಟ್ಟೆಗಳನ್ನು ಎರಡು ಚೀಲಗಳಲ್ಲಿ ತುಂಬಿಕೊಂಡು ಆಟೊರಿಕ್ಷಾದಲ್ಲಿ ಮಧುರೈ ಹೊರವಲಯದ ಮಾಡಕುಲಂ ಸಮೀಪದ ತಮ್ಮ ಕುಟುಂಬದ ಕೃಷಿ ಭೂಮಿಗೆ ತೆರಳಿ ಸುಟ್ಟುಹಾಕಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಆಟೊರಿಕ್ಷಾ ಸಂಚರಿಸಿದ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಕಲೆಹಾಕಿದ್ದು, ಸ್ಥಳೀಯ ದನ ಕಾಯುವ ವ್ಯಕ್ತಿಯೊಬ್ಬರು ಬಟ್ಟೆಗಳನ್ನು ಸುಡುತ್ತಿದ್ದುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ. ತಲೆಮರೆಸಿಕೊಂಡಿರುವ ನಿಶಾಂತ್ ಪತ್ತೆಗಾಗಿ ಹಾಗೂ ಉಳಿದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲು ಒಂಬತ್ತು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ.

ಕಳ್ಳತನಕ್ಕೂ ಮುನ್ನ ಶಂಕಿತ ವ್ಯಕ್ತಿ ಗ್ರಾಹಕನ ಸೋಗಿನಲ್ಲಿ ಮೂರು ಬಾರಿ ಶೋರೂಂಗೆ ಭೇಟಿ ನೀಡಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರತಿ ಬಾರಿ ಬೇರೆ ಬೇರೆ ಬಟ್ಟೆ ಧರಿಸಿದ್ದರೂ ಒಂದೇ ಬಣ್ಣದ ಕ್ಯಾಪ್ ಮತ್ತು ಕೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದ. ಈ ಭೇಟಿಗಳ ಮೂಲಕ ಶೋರೂಂನ ಒಳಾಂಗಣ ಹಾಗೂ ಆಭರಣಗಳ ಪ್ರದರ್ಶನ ಪೆಟ್ಟಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನವೆಂಬರ್ 12ರ ಬೆಳಗಿನ ಜಾವ 3.34ರ ಸುಮಾರಿಗೆ ಶೋರೂಂ ಬಳಿ ಬಂದಿದ್ದ ಕಳ್ಳ, ಸುಮಾರು ಒಂದು ಗಂಟೆ ಕಾಲ ಆಭರಣಗಳನ್ನು ಚೀಲಗಳಲ್ಲಿ ತುಂಬಿಕೊಂಡು ಸ್ಕೂಟರ್‌ನಲ್ಲಿ ಪರಾರಿಯಾಗಿದ್ದ. ನವೆಂಬರ್ 12, ಗುರುವಾರ ಬೆಳಿಗ್ಗೆ ಶೋ ರೂಂ ನೌಕರರು ಔಟ್ಲೆಟ್ ತೆರೆಯಲು ಬಂದಾಗ ಮಾರಾಟಕ್ಕೆ ಇಡಲಾಗಿದ್ದ ಆಭರಣಗಳು ಕಾಣೆಯಾಗಿರುವುದು ಕಂಡುಬಂದಿದೆ.

ತನಿಖೆಯ ಪ್ರಕಾರ, ಮುಸುಕುಧಾರಿ ದರೋಡೆಕೋರನೊಬ್ಬ ಲಿಫ್ಟ್ ಶಾಫ್ಟ್ ಬಳಿಯ ತೆರೆಯುವಿಕೆಯ ಮೂಲಕ ಶೋ ರೂಂ ಒಳಗೆ ಪ್ರವೇಶಿಸಿದ್ದಾನೆ, ಅಲ್ಲಿ ಅಳವಡಿಕೆ ಕೆಲಸ ನಡೆಯುತ್ತಿತ್ತು. ಶಂಕಿತನು ಕಟ್ಟಡಕ್ಕೆ ಪ್ರವೇಶ ಪಡೆಯಲು ಲಿಫ್ಟ್ ಕೆಲಸಕ್ಕೆ ಅಳವಡಿಸಲಾದ ಹಗ್ಗವನ್ನು ಬಳಸಿದ್ದಾನೆ ಎಂದು ನಂಬಲಾಗಿದೆ. ಅಕ್ಟೋಬರ್ 14 ರಂದು ಉದ್ಘಾಟನೆಗೊಂಡಿದ್ದ ಶೋ ರೂಂ, ಕಳ್ಳತನ ನಡೆದಾಗ ಕೇವಲ 15 ದಿನಗಳ ಕಾಲ ಕಾರ್ಯನಿರ್ವಹಿಸಿತ್ತು.

ಸುಮಾರು 15 ಕೋಟಿ ರೂ. ಮೌಲ್ಯದ 11.465 ಕೆಜಿ ಚಿನ್ನಾಭರಣಗಳು ಮತ್ತು ವಜ್ರದ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಮಧುರೈನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ಈ ಹಿಂದೆ ದೃಢಪಡಿಸಿದ್ದರು. ವಜ್ರದ ಆಭರಣಗಳ ಮೌಲ್ಯ ಸುಮಾರು 15 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮೊದಲೇ ಶೋರೂಂ ಆರಂಭಿಸಿದ್ದರಿಂದ ಭದ್ರತೆಯಲ್ಲಿ ಗಂಭೀರ ಲೋಪಗಳಿದ್ದವು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಲಾಕರ್ ಸೌಲಭ್ಯ ಇನ್ನೂ ಸಿದ್ಧವಾಗದ ಕಾರಣ, ರಾತ್ರಿ ವೇಳೆಯೂ ಆಭರಣಗಳನ್ನು ಪ್ರದರ್ಶನ ಪೆಟ್ಟಿಗೆಗಳಲ್ಲೇ ಇಡಲಾಗಿತ್ತು. ಜೊತೆಗೆ, ಶೋರೂಂ ಬಾಗಿಲು ಹಾಕುವಾಗ ಅಲಾರಂ (Anti-theft alarm) ಅನ್ನು ಸಕ್ರಿಯಗೊಳಿಸಿರಲಿಲ್ಲ ಎಂದು ಮಧುರೈ ಪೊಲೀಸ್ ಆಯುಕ್ತ ಎಸ್. ರಾಜೇಂದಿರನ್ ತಿಳಿಸಿದ್ದಾರೆ.

ಕಟ್ಟಡದ ಹೊರಗಿದ್ದ ಕಬ್ಬಿಣದ ಸ್ಕ್ಯಾಫೋಲ್ಡಿಂಗ್ ಮೂಲಕ ಮೂರನೇ ಮಹಡಿಯ ಟೆರೇಸ್ ಹತ್ತಿದ ಕಳ್ಳ, ಅಲ್ಲಿಂದ ಅಪೂರ್ಣಗೊಂಡಿದ್ದ ಲಿಫ್ಟ್ ಶಾಫ್ಟ್ ಮೂಲಕ ಶೋರೂಂ ಒಳಗೆ ಇಳಿದಿದ್ದಾನೆ. ನವೆಂಬರ್ 5ರಂದೇ ಮುಸುಕುಧಾರಿಯೊಬ್ಬ ಸ್ಕ್ಯಾಫೋಲ್ಡಿಂಗ್ ಹತ್ತಲು ಯತ್ನಿಸಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದರೂ ಸಿಬ್ಬಂದಿ ಅದನ್ನು ಗಮನಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment