ಸುರತ್ಕಲ್‌ನಲ್ಲಿ ಠಾಣೆ ಎದುರು ಹೈಡ್ರಾಮಾ; ಯುವಕನ ಶವವನ್ನಿಟ್ಟು ಪೊಲೀಸ್ ಠಾಣೆ ಎದುರು ಪ್ರತಿಭಟನೆ, ಶಾಸಕ ಭರತ್ ಶೆಟ್ಟಿ ಭೇಟಿ..!

Prakhara News
2 Min Read

ಮಂಗಳೂರು: ಯುವ ಜೋಡಿಗೆ ಬೀಚ್‌ನಲ್ಲಿ ಕಿರುಕುಳ ನೀಡಿದರೆಂಬ ಆರೋಪದಲ್ಲಿ ಪೊಲೀಸ್ ತನಿಖೆ ಎದುರಿಸುತ್ತಿದ್ದ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರ ದೌರ್ಜನ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ಮೃತನ ಶವವನ್ನಿಟ್ಟು ನೂರಾರು ಸ್ಥಳೀಯರು ಸುರತ್ಕಲ್ ಪೊಲೀಸ್ ಠಾಣೆಯ ಎದುರು ಮಂಗಳವಾರ ಸಂಜೆ ಬೃಹತ್ ಪ್ರತಿಭಟನೆ ನಡೆಸಿದರು.

ಹೊಸಬೆಟ್ಟು ನಿವಾಸಿ ಸೋಮನಾಥ ಆತ್ಮಹತ್ಯೆ ಮಾಡಿಕೊಂಡ ಯುವಕ. ಘಟನೆಯಿಂದಾಗಿ ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಜನಸ್ತೋಮದಿಂದಾಗಿ ಕೆಲಕಾಲ ಸುಗಮ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ಎರಡು ದಿನಗಳ ಹಿಂದೆ (ಅಕ್ಟೋಬರ್ 25) ಕಾಸರಗೋಡು ಮೂಲದ ಯುವಕ ಹಾಗೂ ದೆಹಲಿ ಮೂಲದ ಯುವತಿಯೊಬ್ಬರು ಹೊಸಬೆಟ್ಟು ಬಳಿಯ ಮೀನುಗಾರಿಕಾ ಜೆಟ್ಟಿ ಬಳಿ ಇದ್ದಾಗ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಎರಡೂ ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಯುವತಿಯು ನೀಡಿದ ದೂರಿನನ್ವಯ ಸುರತ್ಕಲ್ ಪೊಲೀಸರು ಹೊಸಬೆಟ್ಟು ನಿವಾಸಿ ಸೋಮನಾಥ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಠಾಣೆಗೆ ಕರೆಸಿದ್ದರು. ಇದರಿಂದ ತೀವ್ರ ಮನನೊಂದ ಸೋಮನಾಥ, ಸೋಮವಾರ ಬೆಳಿಗ್ಗೆ “ನನ್ನ ಸಾವಿಗೆ ನಾನೇ ಕಾರಣ” ಎಂದು ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.

ಪೋಸ್ಟ್ ಮಾರ್ಟಂ ಪ್ರಕ್ರಿಯೆ ಮುಗಿದ ಬಳಿಕ ಆಸ್ಪತ್ರೆಯಿಂದ ಶವವನ್ನು ಮನೆಗೆ ಕೊಂಡೊಯ್ಯುವಾಗ, ಪೊಲೀಸರ ದೌರ್ಜನ್ಯ ಹಾಗೂ ಸುಳ್ಳು ದೂರು ಹೂಡಿರುವುದನ್ನು ಖಂಡಿಸಿ ಸ್ಥಳೀಯ ಯುವಕರು ಹಾಗೂ ಸಾರ್ವಜನಿಕರು ಮಂಗಳವಾರ ಸಂಜೆ ಶವವನ್ನು ನೇರವಾಗಿ ಸುರತ್ಕಲ್ ಪೊಲೀಸ್ ಠಾಣೆಯ ಮುಂಭಾಗಕ್ಕಿಟ್ಟು ದಿಢೀರ್ ಧರಣಿ ಆರಂಭಿಸಿದರು.

ವಿಷಯ ತಿಳಿಯುತ್ತಿದ್ದಂತೆಯೇ ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಜೊತೆಗೂಡಿ ಪೊಲೀಸರ ನಡವಳಿಕೆಯನ್ನು ತೀವ್ರವಾಗಿ ಪ್ರಶ್ನಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಶಾಸಕ ಭರತ್ ಶೆಟ್ಟಿ ಅವರು ಸಾರ್ವಜನಿಕರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಎರಡೂ ಕಡೆಯವರಿಂದಲೂ ದೂರು ಪಡೆದು ಸೂಕ್ತ ತನಿಖೆ ಹಾಗೂ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಸೂಚಿಸಿದ ಬಳಿಕ ಸ್ಥಳೀಯರು ಪ್ರತಿಭಟನೆ ಹಿಂಪಡೆದರು.

Share This Article
Leave a Comment