ಕರ್ನಾಟಕ ಹೈಕೋರ್ಟ್ ಬೈಕ್ಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಮಹತ್ವದ ಆದೇಶ ನೀಡಿದೆ. ಬೈಕ್ ಟ್ಯಾಕ್ಸಿ ನಿಷೇಧಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಿ, ಏಕಸದಸ್ಯ ಪೀಠದ ಆದೇಶವನ್ನು ವಜಾಗೊಳಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಹಸಿರು ನಿಶಾನೆ ದೊರೆತಿದೆ. ಬೈಕ್ ಮಾಲೀಕರು ಹಾಗೂ ಅಗ್ರಿಗೇಟರ್ಗಳು ಪರವಾನಗಿ ಕೋರಿ ಅರ್ಜಿ ಸಲ್ಲಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.


ಬೈಕ್ಗಳನ್ನು ಸಾರಿಗೆ ವಾಹನಗಳನ್ನಾಗಿ (ಟ್ಯಾಕ್ಸಿಯಾಗಿ) ಬಳಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ನೀಡಿದೆ.

ಕರ್ನಾಟಕ ಸರ್ಕಾರ ಬೈಕ್ ಟ್ಯಾಕ್ಸಿಯನ್ನು ನಿಷೇಧ ಮಾಡಿತ್ತು. ಈ ಬೆನ್ನಲ್ಲೆ ಓಲಾ, ಊಬರ್ ಮತ್ತಿತರ ಅಗ್ರಿಗೇಟರ್ಗಳು ಮೇಲ್ಮನವಿ ಸಲ್ಲಿಸಿದ್ದರು. ಕಂಪನಿಗಳ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ನಿಷೇಧಿಸಿದ್ದನ್ನು ಎತ್ತಿಹಿಡಿದಿದ್ದ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಗೊಳಿಸಿದೆ. ಈ ಮೂಲಕ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಹಸಿರು ನಿಶಾನೆ ಸಿಕ್ಕಿದೆ.
ಪೀಠವು 2 ಮಹತ್ವದ ಸೂಚನೆ
ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ಈ ಆದೇಶವನ್ನು ನೀಡಿದೆ. ಜತೆಗೆ ಬೈಕ್ ಮಾಲೀಕರು ಅಥವಾ ಅಗ್ರಿಗೇಟರ್ ಗಳು ಸಾರಿಗೆ ವಾಹನಗಳನ್ನಾಗಿ ಬಳಸಲು ಅನುಮತಿ ಕೋರಿ ಮನವಿ ಸಲ್ಲಿಸಬೇಕು. ಕಾನೂನಿನಡಿ ಸರ್ಕಾರ ಪರವಾನಿಗೆ ನೀಡಬೇಕು ಎಂದು ಪೀಠವು 2 ಮಹತ್ವದ ಸೂಚನೆಯನ್ನು ಆದೇಶದಲ್ಲಿ ಉಲ್ಲೇಖಸಿದೆ.
ಉದ್ಯೋಗ ಜತೆಗೆ ಕಡಿಮೆ ವೆಚ್ಚದ ಪ್ರಯಾಣ
ಬೆಂಗಳೂರು ಸೇರಿದಂತೆ ರಾಜ್ಯ ಪ್ರಮುಖ ನಗರಗಳಲ್ಲಿ ಸಾವಿರಾರು ಯುವಕ, ಯುವತಿಯರು ಬೈಕ್ ಟ್ಯಾಕ್ಸಿ ಓಡಿಸಿ ಜೀವನ ನಡೆಸುತ್ತಿದ್ದರು. ಇನ್ನುಷ್ಟು ಮಂದಿ ಪರ್ಯಾಯ ಆದಾಯವಾಗಿಯೂ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದರು. ಇನ್ನು ಆಟೋ, ಕಾರು ಟ್ಯಾಕ್ಸಿಗಳಿಗೆ ಹೋಲಿಸಿದರೆ ಬೈಕ್ ಟ್ಯಾಕ್ಸಿ ದರ ಅರ್ಧದಷ್ಟು ಕಡಿಮೆ ಇದೆ. ಇದು ಪ್ರಯಾಣಿಕರು/ ಗ್ರಾಹಕರಿಗೂ ಹಣ ಉಳಿತಾಯ ಮಾಡಿಕೊಡುತ್ತದೆ.
ಆಟೋ, ಟ್ಯಾಕ್ಸಿ ಚಾಲಕರ ಕಿರುಕುಳಕ್ಕೆ ಬ್ರೇಕ್?
ಬೈಕ್ ಟ್ಯಾಕ್ಸಿ ಓಡಿಸುವವರಿಗೆ ಆಟೋರಿಕ್ಷಾ, ಕಾರ್ ಟ್ಯಾಕ್ಸಿ ಚಾಲಕರಿಂದ ಸಾಕಷ್ಟು ಕಿರಿಕಿರಿ ಯಾಗುತ್ತಿತ್ತು. ಬೆದರಿಗೆ, ಹಲ್ಲೆ ಪ್ರಕರಣಗಳು ವರದಿಯಾಗಿದ್ದರು. ಸದ್ಯ ಕರ್ನಾಟಕ ಹೈಕೋರ್ಟ್ನಿಂದಲೇ ಅನುಮತಿ ಸಿಕ್ಕ ಹಿನ್ನೆಲೆ ಬೈಕ್ ಟ್ಯಾಕ್ಸಿ ಚಾಲಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ.

