ನೆಲ್ಯಾಡಿ: ಕಳೆದ ತಿಂಗಳು ಮಾರ್ಚ್ 29 ರಂದು ಅಗಲಿದ ತಮ್ಮ ಮಗ ಸುದೀಪ್ ರೈ ನೆನಪಿಗಾಗಿ ಅವರ ನೆನಪನ್ನು ಶಾಶ್ವತವಾಗಿ ಇರಿಸಲು ಮೇ 1 ಶುಕ್ರವಾರ ವೈಶಾಖ ಹುಣ್ಣಿಮೆ, ಬುದ್ಧ ಪೂರ್ಣಿಮೆ ಹಾಗೂ ಕಾರ್ಮಿಕ ದಿನಾಚರಣೆಯ ಶುಭ ದಿನದಂದು ಮಧ್ಯಾಹ್ನ 12:05 ಗಂಟೆಗೆ ಒಂದು ವಿಶೇಷ ಸ್ಮರಣಾರ್ಥ ಕಾರ್ಯಕ್ರಮವು ದಿ|| ಸುದೀಪ್ ರೈ ಮನೆಯಲ್ಲಿ ಜರುಗಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಚಿದಾನಂದ ಮಾಣಿ ಯವರು ವಹಿಸಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಲವು ಅತಿಥಿಗಳು ಹಾಗೂ ನೆರೆದಿದ್ದ ಸಾರ್ವಜನಿಕರ ಸಮ್ಮುಖದಲ್ಲಿ “ಬಿ.ಸುದೀಪ” ನ ನೆನಪನ್ನು ಸದಾ ಹಸಿರಾಗಿರಿಸಲು “ಕಲ್ಪವೃಕ್ಷ” – “ಶ್ರೀ ಗಂಧ” ಹಾಗೂ ಇನ್ನಿತರ ಸಸಿಗಳನ್ನು ನೆಟ್ಟು ವಿಶೇಷ ಸ್ಮರಣಾರ್ಥ ಕಾರ್ಯಕ್ರಮವು ಜರುಗಿತು.


ತದನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಚಿದಾನಂದ ಮಾಣಿ ಯವರು ಮೃತ ಸುದೀಪನನ್ನು ಸ್ಮರಿಸಿ ಅವರ ಒಡನಾಟದ ಬಗ್ಗೆ ತಿಳಿಸಿದರು. ಸದಾ ಹಸನ್ಮುಖಿ , ಸ್ನೇಹಜೀವಿ ಹಾಗೂ ನಿಷ್ಕಲ್ಮಶ ಹೃದಯವನ್ನು ಹೊಂದಿದ್ದ ಸುದೀಪನ ಅಕಾಲಿಕ ಮರಣವು ತುಂಬಾ ದುಃಖಕರವಾಗಿದ್ದು ಆತನ ಆತ್ಮಹತ್ಯೆಗೆ ಕಾರಣಳಾದ ಸೌಮ್ಯ ಶೆಟ್ಟಿಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಆಗ್ರಹಿಸಿದರು.


ಹಾಗೆಯೇ ಪುತ್ರನನ್ನು ಕಳೆದುಕೊಂಡ ಶೋಕದಲ್ಲಿರುವ ಪೋಷಕರು ಅವನ ನೆನಪಿಗಾಗಿ ಈ ರೀತಿಯ ಒಂದು ಅರ್ಥಪೂರ್ಣ ವಿಶೇಷ ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಜಗದೀಶ್ ಶೆಟ್ಟಿ ಕಾರ್ಕಳ, ಭಾರತೀಯ ಸೇನೆಯ ಮಾಜಿ ಯೋಧರಾದ ಮೋಹನ್ ಶೆಟ್ಟಿ, ನಿವೃತ್ತ BSNL ಉದ್ಯೋಗಿ ಶ್ರೀ ಕಾಂತಪ್ಪ ಗೌಡ , ನೆಲ್ಯಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸಲಾಮ್ ಬಿಲಾಲ್ ಹಾಗೂ ಕೃಷಿಕರಾದ ಗಾಣದಕೋಡಿ ಮೋಹನದಾಸ್ ಶೆಟ್ಟಿ ,ಕರ್ನೋಡಿ ಲಕ್ಷ್ಮಣ ಶೆಟ್ಟಿ, ಪೇದುರು ಡಿಸೋಜಾ, ಬಿ. ಪ್ರವೀಣ ಗೋಳಿತೊಟ್ಟು, ಸಂದೇಶ್ ಬಾಕಿಜಾಲು ಭಾಗವಹಿಸಿದ್ದರು. ಗಂಗಾಧರ ಶೆಟ್ಟಿ ಹೊಸಮನೆಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.


