ಮಂಗಳೂರು: ಸೈಬರ್ ಖದೀಮರಿಗೆ ಬ್ಯಾಂಕ್ ಖಾತೆ ಸಪ್ಲೈ ಮಾಡ್ತಿದ್ದ ಆರೋಪಿ ಅರೆಸ್ಟ್ – ಸೈಬರ್ ಕ್ರೈಂ ಪೊಲೀಸರ ಭರ್ಜರಿ ಕಾರ್ಯಾಚರಣೆ

Prakhara News
1 Min Read

ಮಂಗಳೂರು: ಸಾರ್ವಜನಿಕರನ್ನು ಹೆದರಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡುವ ಕುಖ್ಯಾತ ‘ಡಿಜಿಟಲ್ ಅರೆಸ್ಟ್’ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧಿಗಳಿಗೆ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಕೊಡಿಸಿ ಕಮಿಷನ್ ದಂಧೆ ನಡೆಸುತ್ತಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯ (CEN) ಅಧಿಕಾರಿಗಳು ಯಶಸ್ವಿಯಾಗಿ ದಸ್ತಗಿರಿ ಮಾಡಿದ್ದಾರೆ.

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿ ಜುಬೈರ್ (32) ಬಂಧಿತ ಸೈಬರ್ ವಂಚಕ. ಜುಲೈ 3ರಂದು ಆರೋಪಿಯನ್ನು ಬಂಧಿಸಿದ ಸೈಬರ್ ಪೊಲೀಸರು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಠಾಣೆಯಲ್ಲಿ ದಾಖಲಾಗಿದ್ದ ‘ಡಿಜಿಟಲ್ ಅರೆಸ್ಟ್’ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಈತನ ಪ್ಲಾನ್ ಬಯಲಾಗಿದೆ. ಈತ ಮುಗ್ಧ ಸಾರ್ವಜನಿಕರಿಗೆ ಆಮಿಷ ಒಡ್ಡಿ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಸುತ್ತಿದ್ದ. ಆ ಖಾತೆಗಳನ್ನು ಸೈಬರ್ ವಂಚಕರಿಗೆ ನೀಡಿ, ಅದರ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮ ಹಣದ ವಹಿವಾಟು ನಡೆಸಲು ಪರೋಕ್ಷವಾಗಿ ಸಹಕರಿಸುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಬಂಧಿತ ಆರೋಪಿ ಜುಬೈರ್ ಸಾಮಾನ್ಯ ಅಪರಾಧಿಯಲ್ಲ ಎಂಬುದು ಪ್ರಾಥಮಿಕ ವಿಚಾರಣೆಯಿಂದ ಧೃಡಪಟ್ಟಿದೆ. ಈತನ ವಿರುದ್ಧ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಒಂದು ದರೋಡೆ/ಅಪರಾಧ ಪ್ರಕರಣ ಸೇರಿದಂತೆ ಕರ್ನಾಟಕ ರಾಜ್ಯದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 4 ಗಂಭೀರ ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ವಾರಂಟ್ ಜಾರಿಯಾಗಿದ್ದರೂ ಪೊಲೀಸರ ಕೈಗೆ ಸಿಗದೆ ಈತ ದೀರ್ಘಕಾಲದಿಂದ ತಲೆಮರೆಸಿಕೊಂಡಿದ್ದ. ಇದೀಗ ಸೈಬರ್ ಸೆಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಈತನನ್ನು ಜೈಲಿಗಟ್ಟಿದ್ದಾರೆ. ಈತನ ಲಿಂಕ್ ಇನ್ಯಾವ ಸೈಬರ್ ಗ್ಯಾಂಗ್‌ಗಳ ಜೊತೆ ಇದೆ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share This Article
Leave a Comment