ಮಂಗಳೂರು : ಕಾರಿನಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಅಕ್ರಮ ಜಾನುವಾರು ಸಾಗಾಟ ; ಇಬ್ಬರ ಬಂಧನ.

Prakhara News
1 Min Read

ಮಂಗಳೂರು : ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯ ಮೂಡಬಿದ್ರೆ ಠಾಣಾ ಪೊಲೀಸರು ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ಒಂದು ಗಂಡು ಕರು ಹಾಗೂ ಮಾರುತಿ ಬ್ರೀಜಾ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಮೇ 14ರಂದು ಬೆಳಿಗ್ಗೆ ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ, ಬೆಳುವಾಯಿ ಕಡೆಯಿಂದ ಬಂದ KA19MK4265 ಸಂಖ್ಯೆಯ ಮಾರುತಿ ಬ್ರೀಜಾ ಕಾರು ಪೊಲೀಸರ ಸೂಚನೆಗೂ ನಿಲ್ಲದೆ ಮುಂದಕ್ಕೆ ಚಲಿಸಿತ್ತು. ಅನುಮಾನಗೊಂಡ ಪೊಲೀಸರು ವಾಹನವನ್ನು ಬೆನ್ನಟ್ಟಿದಾಗ, ಆರೋಪಿಗಳು ಕಾರನ್ನು ಮನೆ ಕಂಪೌಂಡ್ ಒಳಗೆ ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಬಳಿಕ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಹಂಡೇಲಿನ ಮಹಮ್ಮದ್ ಆರಿಫ್ ಹಾಗೂ ಗಂಟಾಲಕಟ್ಟೆಯ ಇಮ್ರಾನ್ @ ಇಬ್ರಾಹಿಂ ಎಂದು ಗುರುತಿಸಲಾಗಿದೆ.

ಕಾರಿನೊಳಗೆ ಹಿಂಸಾತ್ಮಕವಾಗಿ ಕಟ್ಟಿ ಸಾಗಾಟ ನಡೆಸುತ್ತಿದ್ದು ಪರಿಶೀಲನೆ ವೇಳೆ ಕಾರಿನ ಹಿಂಬದಿ ಸೀಟ್ ತೆಗೆದು, ಅದರ ಮೇಲೆ ಪ್ಲಾಸ್ಟಿಕ್ ಹಾಸಿ ಗಂಡು ಕರುವಿನ ಕಾಲು ಹಾಗೂ ತಲೆಯನ್ನು ಹಗ್ಗದಿಂದ ಕಟ್ಟಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ವಿವಿಧ ಕಡೆಗಳಿಂದ ದನಗಳನ್ನು ಕಳ್ಳತನ ಮಾಡಿ, ಕಡಿದು ಮಾಂಸ ಮಾರಾಟ ಅಥವಾ ಇತರರಿಗೆ ಮಾರಾಟ ಮಾಡಲು ಸಂಗ್ರಹಿಸುತ್ತಿದ್ದುದಾಗಿ ತಿಳಿದುಬಂದಿದೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು:
ಬಂಧಿತ ಮಹಮ್ಮದ್ ಆರಿಫ್ ವಿರುದ್ಧ ಗೋಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಹಲವು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಇಮ್ರಾನ್ ವಿರುದ್ಧವೂ ಎನ್‌ಡಿಪಿಎಸ್ ಮತ್ತು ಕೆಪಿ ಆ್ಯಕ್ಟ್ ಅಡಿ ಪ್ರಕರಣಗಳು ದಾಖಲಾಗಿವೆ. ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment