ಮಂಗಳೂರು: ನಗರದ ಹೊರವಲಯದ ತೊಕ್ಕೋಟಿನಲ್ಲಿ ನಡೆದ ಅರಿಫ್ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಇದೀಗ ಆರೋಪಿಗಳ ವಿರುದ್ಧ ಅತ್ಯಂತ ಕಠಿಣವಾದ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ – KCOCA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕೊಲೆ ಕೃತ್ಯವು ವ್ಯವಸ್ಥಿತ ಸಂಘಟಿತ ಅಪರಾಧ ಜಾಲದಿಂದ ನಡೆದಿದೆ ಎಂಬುದು ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ಪ್ರಕರಣದಲ್ಲಿ ಇದುವರೆಗೆ ಒಟ್ಟು 15 ಮಂದಿ ಆರೋಪಿಗಳ ಭಾಗಿಯಾಗಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಈ ಪೈಕಿ 10 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಚಾರಣೆ ಪೂರ್ಣಗೊಂಡ ಬಳಿಕ ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಐವರು ಆರೋಪಿಗಳ ಪೈಕಿ ಕೆಲವರು ವಿದೇಶದಲ್ಲಿದ್ದು, ಅವರನ್ನು ಸೆರೆಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣಕ್ಕೆ ಕೋಕಾ ಕಾಯ್ದೆ ಅನ್ವಯಿಸಿರುವ ಹಿನ್ನೆಲೆಯಲ್ಲಿ, ಈ ಸಂಬಂಧಿತ ಆದೇಶಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ ಪ್ರಕರಣದ ವಿಚಾರಣೆಯನ್ನು ಮೈಸೂರಿನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲಾಗುವುದು. ಕೋಕಾ ಕಾಯ್ದೆಯಡಿ ಸಂಘಟಿತ ಅಪರಾಧ ಸಿಂಡಿಕೇಟ್‌ನ ಸದಸ್ಯರಾಗಿರುವುದು ಅಥವಾ ಅಂತಹ ಗುಂಪುಗಳೊಂದಿಗೆ ನಂಟು ಹೊಂದಿರುವುದೇ ದೊಡ್ಡ ಅಪರಾಧವಾಗಿದ್ದು, ಇದಕ್ಕೆ ಕಠಿಣ ಜೈಲು ಶಿಕ್ಷೆಯೂ ವಿಧಿಸಲಾಗುತ್ತದೆ.

ಸದ್ಯ ತಲೆಮರೆಸಿಕೊಂಡಿರುವ ಮತ್ತು ವಿದೇಶದಲ್ಲಿರುವ ಉಳಿದ ಐವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಸಂಘಟಿತ ಜಾಲದ ಸಂಪೂರ್ಣ ಹೂರಣವನ್ನು ಬಯಲಿಗೆಳೆಯಲು ತನಿಖಾ ತಂಡವು ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.


