ಮಂಗಳೂರು: ನಗರದ ಹಿರಿಯ ಶಿಕ್ಷಣ ತಜ್ಞೆ, ಸಮಾಜ ಸೇವಕಿ ಎ. ರತ್ನಕಾಂತಿ ಶೆಟ್ಟಿ (93) ಅವರು ವಯೋಸಹಜ ಅನಾರೋಗ್ಯದಿಂದ ನಗರದ ಕದ್ರಿಯಲ್ಲಿರುವ ತಮ್ಮ ಸ್ವಗೃಹದಲ್ಲಿ ಭಾನುವಾರ ನಿಧನರಾದರು. ಮೃತರು ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ನಾಲ್ವರು ಪುತ್ರರಾದ ದೇವಿಚರಣ್ ಶೆಟ್ಟಿ, ಡಾ. ಶಿವಶರಣ್ ಶೆಟ್ಟಿ ಹಾಗೂ ಹರಿಕಿಶನ್ ಶೆಟ್ಟಿ ಮತ್ತು ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.


ಮಂಗಳೂರಿನ ಹಂಪನಕಟ್ಟೆಯ ಸರ್ಕಾರಿ ಪದವಿ ಕಾಲೇಜಿನಲ್ಲಿ (ಪ್ರಸ್ತುತ ವಿಶ್ವವಿದ್ಯಾನಿಲಯ ಕಾಲೇಜು) ಪ್ರಾಧ್ಯಾಪಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದ ರತ್ನಕಾಂತಿ ಶೆಟ್ಟಿ ಅವರು, ಬಳಿಕ ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಉಪನಿರ್ದೇಶಕಿಯಾಗಿ ಹಾಗೂ ಪ್ರಾದೇಶಿಕ ನಿರ್ದೇಶಕಿಯಾಗಿ ದಕ್ಷ ಸೇವೆ ಸಲ್ಲಿಸಿದ್ದರು.

ಶಿಕ್ಷಣ ಮತ್ತು ಸಾಮಾಜಿಕ ಸೇವೆಯನ್ನು ವಿಸ್ತರಿಸುವ ಉದ್ದೇಶದಿಂದ ‘ಪ್ರೇಮಕಾಂತಿ ಶಿಕ್ಷಣ ಮತ್ತು ಚಾರಿಟಬಲ್ ಟ್ರಸ್ಟ್’ ಸ್ಥಾಪಿಸಿ ಅದರ ಅಧ್ಯಕ್ಷೆಯಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ ‘ಶ್ರೀದೇವಿ ಎಜುಕೇಷನ್ ಟ್ರಸ್ಟ್ ಮತ್ತು ಕಾಲೇಜುಗಳ’ ಸಂಸ್ಥಾಪಕ ನಿರ್ದೇಶಕಿಯಾಗಿ ಹಾಗೂ ಶ್ರೀ ರಾಮಕೃಷ್ಣ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಗಾಗಿ ಅವರಿಗೆ ಹಲವಾರು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಅವರಿಗೆ ಒಲಿದುಬಂದಿದ್ದವು. ರತ್ನಕಾಂತಿ ಶೆಟ್ಟಿ ಅವರ ನಿಧನಕ್ಕೆ ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.



