ಮಂಗಳೂರು: ₹82 ಕೋಟಿ ಮೌಲ್ಯದ ಮಾದಕ ವಸ್ತು ಸುಟ್ಟು ನಾಶಪಡಿಸಿದ ಪೊಲೀಸರು..!

Prakhara News
1 Min Read

ಮಂಗಳೂರು : ಮಂಗಳೂರು ನಗರ ಪೊಲೀಸ್ ವ್ಯಾಪ್ತಿಯಲ್ಲಿ ವಿವಿಧ ದಾಳಿಗಳ ವೇಳೆ ವಶಪಡಿಸಿಕೊಳ್ಳಲಾಗಿದ್ದ ಸುಮಾರು ₹82 ಕೋಟಿ ಮೌಲ್ಯದ ಬೃಹತ್ ಪ್ರಮಾಣದ ಮಾದಕ ವಸ್ತುಗಳನ್ನು ಮಾನ್ಯ ನ್ಯಾಯಾಲಯದ ಅನುಮತಿಯೊಂದಿಗೆ ಜುಲೈ 29ರಂದು ಮುಲ್ಕಿಯ ಕೊಲ್ನಾಡು ಕೈಗಾರಿಕಾ ಪ್ರದೇಶದಲ್ಲಿ ಪರಿಸರ ಸ್ನೇಹಿ ವಿಧಾನದಲ್ಲಿ ಸುಟ್ಟು ನಾಶಪಡಿಸಲಾಯಿತು.

ಬುಧವಾರ ಬೆಳಿಗ್ಗೆ 11.00 ಗಂಟೆಗೆ ಮುಲ್ಕಿಯ ಕೊಲ್ನಾಡು ಇಂಡಸ್ಟ್ರಿಯಲ್ ಪ್ರದೇಶದಲ್ಲಿರುವ ‘ರಾಮ್ಕಿ ಎನರ್ಜಿ ಅಂಡ್ ಎನ್ವಿರಾನ್‌ಮೆಂಟ್ ಲಿಮಿಟೆಡ್’ (Re Sustainability Healthcare Solutions Ltd.) ಸಂಸ್ಥೆಯಲ್ಲಿ, ‘ಡ್ರಗ್ ಡಿಸ್ಪೋಸಲ್ ಕಮಿಟಿ’ ಸಮಕ್ಷಮದಲ್ಲಿ ಈ ಕಾರ್ಯಕ್ರಮ ನಡೆಯಿತು. ನಗರದ 16 ಪೊಲೀಸ್ ಠಾಣೆಗಳ 59 ಎನ್‌ಡಿಪಿಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 450 ಕೆ.ಜಿ ಗಾಂಜಾ, 43 ಕೆ.ಜಿ 260 ಗ್ರಾಂ ಎಂ.ಡಿ.ಎಂ.ಎ., 80 ಗ್ರಾಂ ಚರಸ್, 880 ಗ್ರಾಂ ಹೈಡ್ರೋ ವೀಡ್ ಗಾಂಜಾ ಹಾಗೂ 1 ಕೆ.ಜಿ 200 ಗ್ರಾಂ ಭಾಂಗ್ ಅನ್ನು ನಾಶಪಡಿಸಲಾಯಿತು.

ನಾಶಪಡಿಸಲಾದ ವಸ್ತುಗಳಲ್ಲಿ ಪ್ರಮುಖವಾಗಿ 2024ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ₹75 ಕೋಟಿ ಮೌಲ್ಯದ 37 ಕೆ.ಜಿ. ಎಂಡಿಎಂಎ, 2025ರಲ್ಲಿ ಮುಲ್ಕಿ ಠಾಣೆಯಲ್ಲಿ ದಾಖಲಾಗಿದ್ದ ₹4.47 ಕೋಟಿ ಮೌಲ್ಯದ 4 ಕೆ.ಜಿ. ಎಂಡಿಎಂಎ, ಕೊಣಾಜೆ ಠಾಣೆಯ ₹20 ಲಕ್ಷ ಮೌಲ್ಯದ 106 ಕೆ.ಜಿ. ಗಾಂಜಾ ಹಾಗೂ ಮೂಡಬಿದ್ರೆ ಠಾಣೆಯ ₹36 ಲಕ್ಷ ಮೌಲ್ಯದ 111 ಕೆ.ಜಿ. ಗಾಂಜಾ ಸೇರಿವೆ.
2026ನೇ ಸಾಲಿನಲ್ಲಿ ಇದುವರೆಗೆ ಒಟ್ಟು 87 ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿಕೊಂಡು 157 ಮಾದಕ ವಸ್ತು ಮಾರಾಟಗಾರರನ್ನು (Peddlers) ಬಂಧಿಸಲಾಗಿದೆ.

ಈ ಕಾರ್ಯಾಚರಣೆಗಳಲ್ಲಿ ₹8.18 ಕೋಟಿ ಮೌಲ್ಯದ 148 ಕೆ.ಜಿ ಗಾಂಜಾ, 7 ಕೆ.ಜಿ ಎಂ.ಡಿ.ಎಂ.ಎ., 1.7 ಕೆ.ಜಿ ಹೈಡ್ರೋ ವೀಡ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ 463 ವ್ಯಕ್ತಿಗಳ ವಿರುದ್ಧ 356 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share This Article
Leave a Comment