ಕೊರಗಜ್ಜ ವೃತ್ತ ನಿರ್ಮಾಣಕ್ಕೆ ವಿರೋಧ – ಯಾರೋ ಹೊರಗಿನಿಂದ ಬಂದ ಇಬ್ಬರು ವ್ಯಕ್ತಿಗಳು ಹೇಳಿಕೆ ನೀಡುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ -ಖಾದರ್

Prakhara News
1 Min Read

ಮಂಗಳೂರು : ಮಂಗಳೂರು ಹೊರವಲಯದ ಕುತ್ತಾರಿನಲ್ಲಿ ನಿಟ್ಟೆ ಪರಿಗಣಿತ ವಿವಿ ನಿರ್ಮಿಸಲು ಉದ್ಧೇಶಿಸಿರುವ ವೃತ್ತಕ್ಕೆ ಕೊರಗಜ್ಜನ ಹೆಸರು ಇಡುವುದಕ್ಕೆ ಕೆಲವರು ಸ್ಪೀಕರ್ ಖಾದರ್ ಎದುರು ವಿರೋಧ ವ್ಯಕ್ತಪಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಚಾರ ಕುರಿತಂತೆ ಸ್ಪೀಕರ್ ಖಾದರ್ ಇದೀಗ ಸ್ಪಷ್ಟನೆ ನೀಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕೊರಗಜ್ಜನ ವೃತ್ತದ ಕುರಿತು ವ್ಯಕ್ತವಾಗುತ್ತಿರುವ ನಕಾರಾತ್ಮಕ ಹೇಳಿಕೆಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಊರಿನ ಜನತೆ ಒಗ್ಗಟ್ಟಾಗಿದ್ದು, ಕೆಲವೇ ಕೆಲವು ವ್ಯಕ್ತಿಗಳ ಹೇಳಿಕೆಯಿಂದ ಸೌಹಾರ್ದತೆಗೆ ಧಕ್ಕೆ ತರಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಬರುವ ಪ್ರತಿಯೊಂದು ವಿಚಾರಕ್ಕೂ ಉತ್ತರ ಕೊಡುತ್ತಾ ಕೂರಲು ಸಾಧ್ಯವಿಲ್ಲ. ಒಂದಿಬ್ಬರ ವೈಯಕ್ತಿಕ ಹೇಳಿಕೆಗಳಿಗೆ ಚರ್ಚೆ ಮಾಡುವ ಅಗತ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.
ಯಾರೋ ಹೊರಗಿನಿಂದ ಬಂದ ಇಬ್ಬರು ವ್ಯಕ್ತಿಗಳು ಇಲ್ಲಿ ಮನೆ ಮಾಡಿ ಹೇಳಿಕೆ ನೀಡುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಊರಿನ ಜನರು ಸಂಪೂರ್ಣ ಒಗ್ಗಟ್ಟಿನಲ್ಲಿದ್ದಾರೆ. ನಾವು ಯಾವಾಗಲೂ ಸಕಾರಾತ್ಮಕ ಚಿಂತನೆಯನ್ನು ಹೊಂದಿರಬೇಕು ಹೊರತು ನಕಾರಾತ್ಮಕ ವಿಚಾರಗಳಿಗಲ್ಲ. ಶೀಘ್ರದಲ್ಲೇ ನಡೆಯಲಿರುವ ಅನಾವರಣ ಕಾರ್ಯಕ್ರಮಕ್ಕೆ ಎಲ್ಲರೂ ಬರಬೇಕು ಎಂದು ಅವರು ಆಹ್ವಾನ ನೀಡಿದ್ದಾರೆ.

ಊರಿನಲ್ಲಿ ಒಂದಿಬ್ಬರು ದಾರಿ ತಪ್ಪಿದವರು ಇದ್ದಾರೆ. ಅಂತಹವರನ್ನು ಸರಿಪಡಿಸುವ ಜವಾಬ್ದಾರಿ ಊರಿನವರ ಮೇಲಿದ್ದು, ಆ ಕೆಲಸವನ್ನು ನಾವು ಮಾಡುತ್ತೇವೆ ಎಂದು ಯು.ಟಿ. ಖಾದರ್ ಭರವಸೆ ನೀಡಿದ್ದಾರೆ.

Share This Article
Leave a Comment