ಮುಡಾ ವತಿಯಿಂದಲೇ ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿ ನಡೆಯಲಿ : ಶಾಸಕ ವೇದವ್ಯಾಸ್ ಕಾಮತ್

Prakhara News
1 Min Read

ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಅವರ ಸಮಾಧಿ ಬಳಿ ಪ್ರವಾಸಿ ತಾಣ, ಸಮಗ್ರ ಅಭಿವೃದ್ಧಿ ಕಾಮಗಾರಿಗೆ ಮೀಸಲಿಟ್ಟಿದ್ದ 3 ಕೋಟಿ ಅನುದಾನವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿರುವುದರಿಂದ, ಮುಡಾ ವತಿಯಿಂದಲೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ಶಾಸಕ ವೇದವ್ಯಾಸ ಕಾಮತ್ ರವರು ಆಗ್ರಹಿಸಿದರು.

ಈ ಬಗ್ಗೆ ಮುಡಾ ಅಧ್ಯಕ್ಷರಿಗೆ, ಆಯುಕ್ತರಿಗೆ ಪತ್ರ ಬರೆದ ಶಾಸಕರು, ದಲಿತೋದ್ದಾರಕ, ಪೂಜನೀಯ ಕುದ್ಮುಲ್ ರಂಗರಾವ್ ಅವರ ಸಮಾಧಿ ಅಭಿವೃದ್ಧಿಗಾಗಿ 2022ರ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ -1 ಮೂಲಕ 3 ಕೋಟಿ ಅನುದಾನವನ್ನು ಮಂಜೂರುಗೊಳಿಸಲಾಗಿತ್ತು.

ನಂತರ ಅದರ ಗುದ್ದಲಿ ಪೂಜೆಯನ್ನೂ ಸಹ ನಡೆಸಲಾಗಿತ್ತು. ಆದರೆ ರಾಜ್ಯದಲ್ಲಿ ಸರ್ಕಾರ ಬದಲಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಅನುದಾನವನ್ನು ರದ್ದುಗೊಳಿಸಿರುವುದು ಖಂಡನೀಯ ಹಾಗೂ ಬೇಸರದ ಸಂಗತಿ. ಅಲ್ಲದೇ ಪ್ರಸ್ತುತ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಿಂದ ಯಾವುದೇ ಹೊಸ ಅನುದಾನವೂ ನೀಡುತ್ತಿಲ್ಲ. ಪರಿಶಿಷ್ಟ ವರ್ಗದ ಬಂಧುಗಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದ ಆ ಮಹಾತ್ಮರ ಸಮಾಧಿಯ ಅಭಿವೃದ್ಧಿಗೆ ಹಿನ್ನಡೆಯಾಗುವುದನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಕೂಡಲೇ ಮುಡಾ ವತಿಯಿಂದಲೇ 3 ಕೋಟಿ ಅನುದಾನವನ್ನು ಹೊಂದಿಸಿಕೊಂಡು ಯೋಜನೆ ಪೂರ್ಣಗೊಳಿಸುವಂತೆ ಶಾಸಕರು ಆಗ್ರಹಿಸಿದರು.

Share This Article
Leave a Comment