ಉಡುಪಿ: ಕಳೆದ ತಿಂಗಳು ಬೆಚ್ಚಿ ಬೀಳಿಸಿದ್ದ ನವ ವಿವಾಹಿತ ಸುದೀಪ್ ರೈ ನೆಲ್ಯಾಡಿ ಎಂಬ ಯುವಕನ ಆತ್ಮಹತ್ಯೆ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು.


ಸುದೀಪ್ ರೈ ಆತ್ಮಹತ್ಯೆ ಗೆ ಮುಖ್ಯವಾಗಿ ಆತನನ್ನು ಬಲವಂತವಾಗಿ ಮನೆಯವರಿಗೆ ತಿಳಿಸದೆ ರಿಜಿಸ್ಟರ್ ಮದುವೆಯಾಗಿದ್ದ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ ಸೌಮ್ಯ ಶೆಟ್ಟಿ ಯಾನೆ ಅಪ್ಪು ಶೆಟ್ಟಿ ನೀಡಿರುವ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಚೋದನೆಯೇ ಕಾರಣ ಎಂದು ಸುದೀಪನ ಪೋಷಕರು ಹಾಗೂ ಗೆಳೆಯರು ಆರೋಪಿಸಿದ್ದರು.

ಹಾಗೆಯೇ ಕಾರ್ಕಳ ನಗರ ಠಾಣೆಯಲ್ಲಿ ಕೂಡ ಪೋಷಕರು ಪ್ರಕರಣ ದಾಖಲಿಸಿದ್ದರು. ಮಾರ್ಚ್ 29 ರ ಸುದೀಪ್ ರೈ ಮರಣದ ದಿನದ ನಂತರ ಮೊದಲಿಗೆ ಸೌಮ್ಯ ಶೆಟ್ಟಿ ಮಾಧ್ಯಮಗಳ ಎದುರು ಕಣ್ಣೀರಿಡುತ್ತಾ ಸುದೀಪನು ಆತನ ಮನೆಯಲ್ಲೇ ವಿಷ ಸೇವಿಸಿ ಬಂದಿರುವುದಾಗಿ ಹೇಳಿಕೆ ನೀಡಿ ಆತನ ಮನೆಯವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿದ್ದಳು.

ತದನಂತರ ಸುದೀಪನ ಪೋಷಕರು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗಳ ಮುಂದೆ ಪ್ರತಿಯೊಂದು ವಿಷಯದ ಬಗ್ಗೆ ಮಾಹಿತಿ ನೀಡಿದ್ದು ಸೌಮ್ಯ ಶೆಟ್ಟಿಯ ಹಿಂದಿನ ಮದುವೆಗಳ ವಿಚಾರವನ್ನು ದಾಖಲೆ ಮೂಲಕ ಸ್ಪಷ್ಟಪಡಿಸಿದರು. ಸೌಮ್ಯ ಶೆಟ್ಟಿ ತಮಗೆ ಯಾವುದೇ ಮಾಹಿತಿ ನೀಡದೆ ತನ್ನ ಮಗನನ್ನು ಬಲವಂತವಾಗಿ ರಿಜಿಸ್ಟರ್ ಮದುವೆಯಾಗಿದ್ದು ತದನಂತರ ಆತನಿಗೆ ವಿಪರೀತ ಮಾನಸಿಕ ಕಿರುಕುಳ ಹಾಗೂ ತನ್ನ ಊರಿಗೆ ಬಂದು ರಂಪಾಟ ನಡೆಸಿದ ಬಗ್ಗೆಯೂ ವಿವರ ನೀಡಿದ್ದರು.ತನಿಖೆಯನ್ನು ಉನ್ನತ ಮಟ್ಟದಲ್ಲಿ ನಡೆಸಬೇಕೆಂದು ಕೂಡ ಅಗ್ರಹಿಸಿದ್ದರು.ಈ ಬಗ್ಗೆ ಮಾಧ್ಯಮವೊಂದು ಗ್ರೌಂಡ್ ರಿಪೋರ್ಟ್ ನಡೆಸಿ ಕೆಲವು ದಾಖಲೆಗಳನ್ನು ಹಾಗೂ ಪ್ರತ್ಯಕ್ಷ ಸಾಕ್ಷಿಗಳನ್ನು ಕೂಡ ಪ್ರಕಟಿಸಿತ್ತು.
ಈ ಸಂಧರ್ಭದಲ್ಲಿ ಸೌಮ್ಯ ಶೆಟ್ಟಿ ಬಂಧನದ ಭೀತಿಯಿಂದ ಕಣ್ಮರಿಯಾಗಿದ್ದು ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸಿದ್ದು , ಉಡುಪಿ ಜಿಲ್ಲೆಯ ಖಡಕ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ರವರ ಆದೇಶದ ಮೇರೆಗೆ ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಂಡ ಕಾರ್ಕಳ ನಗರ ಠಾಣೆಯ ಪೊಲೀಸರು ಸೌಮ್ಯ ಶೆಟ್ಟಿಯನ್ನು ಪತ್ತೆ ಹಚ್ಚಿ ಏಪ್ರಿಲ್ 11 ರಂದು ಉಡುಪಿಯಲ್ಲಿ ಆಕೆಯನ್ನು ಬಂಧಿಸಿದ್ದರು. ಇದರ ಬಗ್ಗೆ ಸುದೀಪನ ಪೋಷಕರು, ಗೆಳೆಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಉಡುಪಿ ಸೆಷನ್ಸ್ ನ್ಯಾಯಾಲಯದಲ್ಲಿ ಇದೀಗ ಸೌಮ್ಯ ಶೆಟ್ಟಿಯ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು ಆಕೆಗೆ ಜೈಲೂಟ ಮುಂದುವರೆದಿದೆ. ಇನ್ನು ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ಕಾರ್ಕಳ ಪೊಲೀಸರು ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು ಸರಕಾರಿ ಅಭಿಯೋಜಕ ಪ್ರಕಾಶ್ ಚಂದ್ರ ಶೆಟ್ಟಿ ವಾದಿಸಿದ್ದರು.


