ಕಡಬ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತ-ಮದ್ಯದ ಲೋಡ್ ತುಂಬಿದ್ದ ಲಾರಿ ಪಲ್ಟಿ, ಚಾಲಕನಿಗೆ ಗಾಯ..!

Prakhara News
1 Min Read

ಕಡಬ : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ನೆಲ್ಯಾಡಿ ಗ್ರಾಮದ ಬೆಥನಿ ಕಾಲೇಜು ಬಳಿ ರವಿವಾರ ಮುಂಜಾನೆ ಸರಣಿ ಅಪಘಾತ ಸಂಭವಿಸಿದ್ದು, ಮದ್ಯದ ಲೋಡ್ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದೆ. ಚಾಲಕನ ದುಡುಕು ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಘಟನೆಯಲ್ಲಿ ಮೂರು ವಾಹನಗಳು ಜಖಂಗೊಂಡಿವೆ.

ಬೆಂಗಳೂರು ನೆಲಮಂಗಲ ನಿವಾಸಿ ರಾಜ ಎಂ. (56) ಅವರಿಗೆ ಸೇರಿದ ಮದ್ಯದ ಲೋಡ್ ತುಂಬಿದ್ದ ಲಾರಿಯು ಸಕಲೇಶಪುರ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿತ್ತು. ಇದೇ ಮಾರ್ಗದಲ್ಲಿ ಶಮೀರ್ ಎಂಬವರು ಚಲಾಯಿಸುತ್ತಿದ್ದ ಮತ್ತೊಂದು ಲಾರಿ ಹಿಂಬದಿಯಿಂದ ಬಂದು ಮದ್ಯದ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮದ್ಯದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಗ್ಯಾಸ್ ಟ್ಯಾಂಕರ್‌ಗೆ ಉಜ್ಜಿಕೊಂಡು ರಸ್ತೆಯ ಎಡಬದಿಗೆ ಪಲ್ಟಿಯಾಗಿದೆ.

ಅಪಘಾತದ ತೀವ್ರತೆಗೆ ಮದ್ಯದ ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳು ಹಾಗೂ ವಾಹನಗಳು ಜಖಂಗೊಂಡಿವೆ. ಘಟನೆಯಲ್ಲಿ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ನೆಲ್ಯಾಡಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಲಾರಿ ಮಾಲೀಕ ರಾಜ ಎಂ. ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment