ಬೆಳ್ತಂಗಡಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಮಂಡಿಸಿದ ಶೇ. 33 ಮಹಿಳಾ ಮೀಸಲಾತಿ ಎಂಬ ಐತಿಹಾಸಿಕ ಮಸೂದೆಗೆ ಅಡ್ಡಗಾಲು ಹಾಕುವ ಮೂಲಕ ಕಾಂಗ್ರೆಸ್ ಪಕ್ಷವು ದೇಶದ ಮಹಿಳಾ ಕುಲಕ್ಕೆ ದ್ರೋಹ ಬಗೆದಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಿಡಿಕಾರಿದ್ದಾರೆ. ಕಾಂಗ್ರೆಸ್ನ ಈ ನಡೆಯು ಪ್ರಜಾಪ್ರಭುತ್ವದ ಆಶಯಗಳಿಗೆ ಮಸಿ ಬಳಿದಂತಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಬದಲಾಗುತ್ತಿರುವ ಕಾಲಘಟ್ಟದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ ಬಲ ತುಂಬಲು ಕೇಂದ್ರ ಸರ್ಕಾರ ಮುಂದಾಗಿತ್ತು. ಆದರೆ, ಲೋಕಸಭೆಯಲ್ಲಿ ಈ ಮಸೂದೆಗೆ ಮೂರನೇ ಎರಡರಷ್ಟು ಬಹುಮತ ಸಿಗದಂತೆ ಸಂಚು ರೂಪಿಸಿದ ಕಾಂಗ್ರೆಸ್, ಪ್ರಸ್ತುತ ಮಸೂದೆ ವಿಫಲವಾಯಿತೆಂದು ಸಂಭ್ರಮಿಸುತ್ತಿರುವುದು ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಕೇವಲ ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸಬೇಕು ಎಂಬ ಏಕೈಕ ಕಾರಣಕ್ಕಾಗಿ ಇಂತಹ ಮಹತ್ವದ ನಿರ್ಧಾರಕ್ಕೆ ತಡೆ ಒಡ್ಡಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.

ಸ್ವಾತಂತ್ರ್ಯದ ನಂತರದ ಇತಿಹಾಸವನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವುದು ರಕ್ತಗತವಾಗಿ ಬಂದಿರುವ ಚಾಳಿಯಾಗಿದೆ. ಹಲವು ಬಾರಿ 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು ಚುನಾಯಿತ ರಾಜ್ಯ ಸರ್ಕಾರಗಳನ್ನು ವಜಾಗೊಳಿಸಿರುವುದು, 1975ರಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯದ ತೀರ್ಪಿಗೆ ವ್ಯತಿರಿಕ್ತವಾಗಿ ತುರ್ತು ಪರಿಸ್ಥಿತಿ ಘೋಷಿಸಿದ್ದು ಕಾಂಗ್ರೆಸ್ನ ಕರಾಳ ಮುಖಕ್ಕೆ ಸಾಕ್ಷಿಯಾಗಿದೆ. ರಾಜ್ಯಪಾಲರ ಹುದ್ದೆಯನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಸಂವಿಧಾನ ಬಾಹಿರ ಕೃತ್ಯ ಎಸಗುವ ಇತಿಹಾಸ ಆ ಪಕ್ಷಕ್ಕಿದೆ ಎಂದು ಪೂಂಜಾ ವಾಗ್ದಾಳಿ ನಡೆಸಿದ್ದಾರೆ.

ಇನ್ನು ತಂತ್ರಜ್ಞಾನದ ಬಗ್ಗೆ ಮಾತನಾಡುತ್ತಾ, ಜಗತ್ತು ಇವಿಎಂ (EVM) ನಂತಹ ಆಧುನಿಕ ಯುಗದತ್ತ ಸಾಗುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತ್ತೆ ಹಳೆಯ ಬ್ಯಾಲೆಟ್ ಪೇಪರ್ ಪದ್ಧತಿಯಲ್ಲಿ ನಡೆಸಲು ಮಸಲತ್ತು ನಡೆಸುತ್ತಿದೆ. ಇಂತಹ ಹಿಮ್ಮುಖ ಚಲನೆಯ ಮನಸ್ಥಿತಿಯಿರುವ ಜನಪ್ರತಿನಿಧಿಗಳಿಂದ ಪ್ರಗತಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಮಹಿಳೆಯರ ಅಭಿವೃದ್ಧಿ ಹಾಗೂ ತಾಂತ್ರಿಕ ಬೆಳವಣಿಗೆಯ ವಿರೋಧಿಯಾಗಿರುವ ಕಾಂಗ್ರೆಸ್ ಪಕ್ಷದ ನಿಜವಾದ ಬಣ್ಣ ಈ ಘಟನೆಯಿಂದ ಬಟಾಬಯಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


