ಮಂಗಳೂರು: ಅಸ್ಸಾಂ ಹಾಗೂ ಬಿಹಾರ್ ಮೂಲದ ಕಾರ್ಮಿಕರ ಪೂರ್ವಾಪರ ಪರಿಶೀಲಿಸದೆ, ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ 30ಕ್ಕೂ ಹೆಚ್ಚು ಮಂದಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ನೀಡಿರುವ ಗಂಭೀರ ಆರೋಪದಡಿಯಲ್ಲಿ ಬಜಪೆ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.


ಬಜಪೆ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿ ಆಶಾ ಮತ್ತು ಹೆಡ್ ಕಾನ್ಸ್‌ಟೇಬಲ್ ಮಂಜುನಾಥ್ ಅಮಾನತಾದ ಸಿಬ್ಬಂದಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ:
ಇವರಿಬ್ಬರು ಕೈಜೋಡಿಸಿ ಒಟ್ಟು 31 ಮಂದಿಗೆ ನಿಯಮಬಾಹಿರವಾಗಿ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC) ನೀಡಿದ್ದಾರೆ ಎನ್ನಲಾಗಿದೆ. ಉನ್ನತ ಮಟ್ಟದ ತನಿಖಾ ಸಂಸ್ಥೆಯೊಂದರಿಂದ ಈ ರೀತಿಯ ದುರ್ಬಳಕೆಯಾಗಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಎಚ್ಚೆತ್ತ ಮಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಇಬ್ಬರನ್ನೂ ಸಸ್ಪೆಂಡ್ ಮಾಡಿದ್ದಾರೆ.

ಕ್ರಿಮಿನಲ್ ಹಿನ್ನೆಲೆ ಹಾಗೂ ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಸ್ಸಾಂ ಮೂಲದ ಕೆಲವು ಕಾರ್ಮಿಕ ಯುವಕರಿಗೆ ಈ ರೀತಿ ನಿಯಮಬಾಹಿರವಾಗಿ ಪಿಸಿಸಿ ನೀಡಿರುವುದು ಇಲಾಖೆಯ ದೊಡ್ಡ ಲೋಪಕ್ಕೆ ಕಾರಣವಾಗಿದೆ. ಈ ಕುರಿತು ಪೊಲೀಸ್ ಕಮಿಷನರ್ ಅವರು ತನಿಖೆಯ ಜವಾಬ್ದಾರಿಯನ್ನು ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ಅವರಿಗೆ ವಹಿಸಿದ್ದಾರೆ.
ಮಧ್ಯವರ್ತಿಗಳ ಮೂಲಕ ಪಾಸ್‌ಪೋರ್ಟ್ ದುರ್ಬಳಕೆ ಸಂಚು?
MRPL ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡಲು ಬಂದಿದ್ದ ಇವರು ತಾತ್ಕಾಲಿಕ ವೀಸಾ ಹೊಂದಿದ್ದರು. ಆದರೆ, ಪಾಸ್‌ಪೋರ್ಟ್ ಮಾಡಿಸುವ ಉದ್ದೇಶದಿಂದ ಮಧ್ಯವರ್ತಿಗಳನ್ನು ಬಳಸಿಕೊಂಡು ಬಜಪೆ ಪೊಲೀಸ್ ಠಾಣೆಯಿಂದ ಸುಲಭವಾಗಿ PCC ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಈ ರೀತಿ ಸರ್ಟಿಫಿಕೇಟ್ ಪಡೆದ 31 ಮಂದಿಯಲ್ಲಿ ಕೆಲವರು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಕೇಂದ್ರ ತನಿಖಾ ಸಂಸ್ಥೆಯು ಮಂಗಳೂರು ಪೊಲೀಸರನ್ನು ಪ್ರಶ್ನಿಸಿದಾಗ ಈ ಇಡೀ ಜಾಲ ಬೆಳಕಿಗೆ ಬಂದಿದೆ.
ಪಾಸ್‌ವರ್ಡ್ ದುರ್ಬಳಕೆ – ಇಬ್ಬರು ಮಧ್ಯವರ್ತಿಗಳ ಬಂಧನ:
ಇಲಾಖೆಯ ತನಿಖೆಯ ವೇಳೆ ಬಜಪೆ ಠಾಣಾಧಿಕಾರಿಗಳ ಅಧಿಕೃತ ಲಾಗಿನ್ ಪಾಸ್‌ವರ್ಡ್ ಅನ್ನು ದುರ್ಬಳಕೆ ಮಾಡಿಕೊಂಡು ಈ ಸಿಬ್ಬಂದಿಗಳು ಕ್ಲಿಯರೆನ್ಸ್ ನೀಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ತಿಳಿದುಬಂದಿದೆ. ಇದಕ್ಕಾಗಿ ಇಬ್ಬರು ಪೊಲೀಸರು ಮಧ್ಯವರ್ತಿಗಳಾದ ಭರತ್ ಎಕ್ಕಾರು ಹಾಗೂ ಮಮತಾ ಎಂಬವರಿಂದ ಹಣ ಪಡೆದಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿಗಳಾದ ಭರತ್ ಮತ್ತು ಮಮತಾ ಅವರನ್ನು ಬಜಪೆ ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಗೆ ಸಂಬಂಧಿಸಿ BNS ಕಲಂ 336(2), (3), 340(2), 316(5), 318(4) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


