ಅರ್ಕುಳ : ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು ನಗರ ಹಾಗೂ ಅರ್ಕುಳ ಗ್ರಾಮಗಳನ್ನೊಳಗೊಂಡ ಅರ್ಕುಳ ವಸತಿಯ ವತಿಯಿಂದ ದಿನಾಂಕ 18 ಜನವರಿ 2026, ಆದಿತ್ಯವಾರ ಅರ್ಕುಳದಲ್ಲಿ ಹಿಂದೂ ಸಂಗಮ ಸಮಾವೇಶ ಅತ್ಯಂತ ಶಿಸ್ತಿನೊಂದಿಗೆ ಹಾಗೂ ಅದ್ಧೂರಿಯಾಗಿ ನಡೆಯಿತು.



ಸಂಜೆ 3:30ರಿಂದ ಅರ್ಕುಳ ನಾರಾಯಣಗುರು ಮಂದಿರದಿಂದ ಶ್ರೀ ಉಳ್ಳಾಕ್ಲು ಮಗ್ರಂತಾಯಿ ದೈವಸ್ಥಾನದ ಚೆಂಡಿನ ಗದ್ದೆಯವರೆಗೆ ಸಹಸ್ರಾರು ಹಿಂದೂಗಳ ಭಾಗವಹಿಸುವಿಕೆಯಿಂದ ವೈಭವಯುತ ಬೃಹತ್ ಶೋಭಾಯಾತ್ರೆ ನಡೆಯಿತು. ಕುಣಿತ ಭಜನೆ, ಚೆಂಡೆ ವಾದನ, ಘೋಷವಾಕ್ಯಗಳು ಹಾಗೂ ಧಾರ್ಮಿಕ–ಸಾಂಸ್ಕೃತಿಕ ವೈಭವದಿಂದ ಶೋಭಾಯಾತ್ರೆ ಜನಮನ ಸೆಳೆಯಿತು.
ಶೋಭಾಯಾತ್ರೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ವಜ್ರನಾಭ ಶೆಟ್ಟಿ, ಧರ್ಮಾಧಿಕಾರಿ – ಅರ್ಕುಳಬೀಡು ಅವರು ಆಶೀರ್ವಚನ ನೀಡಿದರು. ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಪಿ.ಎಸ್. ಪ್ರಕಾಶ್ ಅವರು ಹಿಂದೂ ಸಮಾಜದ ಏಕತೆ, ಸಂಸ್ಕೃತಿ ಹಾಗೂ ಸಂಘಟಿತ ಶಕ್ತಿಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು ನಿರ್ವಹಣೆಯ ಅಧ್ಯಕ್ಷರು ವಿವೇಕ್ ಕೋಟ್ಯಾನ್ ಕೊಡಕ್ಕಲ್, ಸದಾನಂದ ಆಳ್ವ, ಶ್ರೀಮತಿ ಉಮಾ ಸೋಮಯಾಜಿ, ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರು ಡಾ. ವೈ. ಭರತ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಮಾವೇಶಕ್ಕೆ ಶೋಭೆ ತಂದರು.
ಸಭಾ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮೂಲಕ ತಮ್ಮ ಜೀವನವನ್ನೇ ಸಮಾಜ ಸೇವೆಗೆ ಸಮರ್ಪಿಸಿದ ಹಿರಿಯರಾದ ಮಾಧವ ಟೈಲರ್ ತುಪ್ಪೆಕಲ್ಲು, ಸೇಸಪ್ಪ ಕರ್ಕೇರಾ ಮಂಟಮೆ, ಚಂದಪ್ಪ ಕೊಟ್ಟಾರಿ ವಳಚ್ಚಿಲ್ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಾಯಿಶಕ್ತಿ ಕಲಾಬಳಗ, ಉರ್ವಚಿಲಿಂಬಿ – ಮಂಗಳೂರು ಇವರಿಂದ “ಜೋಡುಜೀಟಿಗೆ” ಎಂಬ ಅದ್ದೂರಿ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ಪೌರಾಣಿಕ ಕಥನ, ಕಲಾವಿದರ ಅಭಿನಯ ಹಾಗೂ ವೇದಿಕೆಯ ವಿನ್ಯಾಸ ಪ್ರೇಕ್ಷಕರ ಗಮನ ಸೆಳೆದು ಕಾರ್ಯಕ್ರಮಕ್ಕೆ ವಿಶಿಷ್ಟ ಆಯಾಮ ನೀಡಿತು.
ಕಾರ್ಯಕ್ರಮವನ್ನು ಅಶೋಕ್ ಕೊಟ್ಟಾರಿ ಸ್ವಾಗತಿಸಿದರು. ದಿನಕರ ಕರ್ಕೇರಾ ಮಂಟಮೆ ವಂದನಾರ್ಪಣೆ ನೆರವೇರಿಸಿದರು. ಸಂಪೂರ್ಣ ಕಾರ್ಯಕ್ರಮವನ್ನು ನಾಗರಾಜ್ ಶೆಟ್ಟಿ ತುಪ್ಪೆಕಲ್ಲು ಅವರು ಸಮರ್ಥವಾಗಿ ನಿರೂಪಿಸಿದರು.
ಅಂತಿಮವಾಗಿ, ಅರ್ಕುಳ ಹಿಂದೂ ಸಂಗಮ ಸಮಾವೇಶವು ಹಿಂದೂ ಸಮಾಜದ ಸಂಘಟಿತ ಶಕ್ತಿ, ಸಾಂಸ್ಕೃತಿಕ ಪರಂಪರೆ ಹಾಗೂ ಧಾರ್ಮಿಕ ಏಕತೆಯನ್ನು ಸಾರುವ ಮಹತ್ವದ ವೇದಿಕೆಯಾಗಿದ್ದು, ಭಾಗವಹಿಸಿದ ಸಹಸ್ರಾರು ಜನರಲ್ಲಿ ಹೊಸ ಉತ್ಸಾಹ ಹಾಗೂ ಆತ್ಮವಿಶ್ವಾಸ ಮೂಡಿಸಿತು.

