ಮಂಗಳೂರು: ವರ್ಕ್ ಫ್ರಮ್ ಹೋಮ್ ಹಾಗೂ ಫ್ಲಿಪ್‌ಕಾರ್ಟ್ ಟಾಸ್ಕ್ ಆಮಿಷ; ಯುವಕನಿಗೆ ₹4.49 ಲಕ್ಷ ಸೈಬರ್ ವಂಚನೆ

Prakhara News
2 Min Read

ಮಂಗಳೂರು: ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್ ಕೆಲಸ ಹಾಗೂ ಫ್ಲಿಪ್‌ಕಾರ್ಟ್ ಬೋನಸ್ ಟಾಸ್ಕ್ ಹೆಸರಿನಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ, ಯುವಕನೊಬ್ಬನಿಂದ ಹಂತ ಹಂತವಾಗಿ ಬರೋಬ್ಬರಿ ₹4,49,000 ಹಣವನ್ನು ಸೈಬರ್ ವಂಚಕರು ಲಪಟಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಸ್ವಂತ ಜಮೀನಿನಲ್ಲಿ ಹೈನುಗಾರಿಕೆ ಹಾಗೂ ಕೃಷಿ ಚಟುವಟಿಕೆ ನಡೆಸುತ್ತಿರುವ 28 ವರ್ಷದ ಯುವಕ ವಂಚನೆಗೆ ಒಳಗಾದವರು. ಈ ಕುರಿತು ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ.

ಪಾರ್ಟ್‌ಟೈಮ್ ಕೆಲಸ ಹುಡುಕುತ್ತಿದ್ದ ದೂರುದಾರರು, ಕಳೆದ ಸೆಪ್ಟೆಂಬರ್‌ನಲ್ಲಿ ಗೂಗಲ್ ಮೂಲಕ ‘Shine.com’ ವೆಬ್‌ಸೈಟ್‌ನಲ್ಲಿ ತಮ್ಮ ರೆಸ್ಯೂಮ್ ಅಪ್‌ಲೋಡ್ ಮಾಡಿದ್ದರು. ಇದರ ಬೆನ್ನಲ್ಲೇ ನವೆಂಬರ್ 3ರಂದು ಅವರ ಮೊಬೈಲ್ ಸಂಖ್ಯೆಯನ್ನು ‘ap5t’ ಎಂಬ ವಾಟ್ಸ್‌ಆ್ಯಪ್ ಗುಂಪಿಗೆ ಸೇರಿಸಿಕೊಳ್ಳಲಾಗಿತ್ತು. ಆ ಗುಂಪಿನಲ್ಲಿದ್ದ ‘ನೇಹಾ ಶರ್ಮಾ’ ಎಂಬಾಕೆ ತಾನು ‘iProspect India’ ಕಂಪನಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡು, ಮನೆಯಲ್ಲೇ ಕುಳಿತು ಮಾಡುವ ಪಾರ್ಟ್‌ಟೈಮ್ ಕೆಲಸವಿದ್ದು, ಕಂಪನಿ ನೀಡುವ ಟಾಸ್ಕ್ ಪೂರ್ಣಗೊಳಿಸಿದರೆ ಪ್ರತಿದಿನ ₹50 ರಿಂದ ₹200 ವರೆಗೆ ಹಣ ಸಿಗಲಿದೆ ಎಂದು ನಂಬಿಸಿದ್ದಾಳೆ. ಇದನ್ನು ನಂಬಿದ ಯುವಕ ಕೆಲಸ ಮಾಡಲು ಒಪ್ಪಿಕೊಂಡಿದ್ದು, ಆರಂಭದಲ್ಲಿ ಕೆಲ ಸಣ್ಣಪುಟ್ಟ ಟಾಸ್ಕ್ ಮುಗಿಸಿದಾಗ ಆತನಿಗೆ ಹಣ ಪಾವತಿಸಲಾಗಿತ್ತು.

ನವೆಂಬರ್ 4ರಂದು ‘ಫ್ಲಿಪ್‌ಕಾರ್ಟ್ ಬೋನಸ್ ಟಾಸ್ಕ್’ ಹೆಸರಿನಲ್ಲಿ ಹೊಸ ಆಮಿಷವೊಡ್ಡಲಾಗಿದೆ. ₹1,000 ದಿಂದ ₹18,000 ವರೆಗೆ ಹೂಡಿಕೆ ಮಾಡಿದರೆ ₹1,200 ವರೆಗೆ ಲಾಭಾಂಶ ನೀಡುವುದಾಗಿ ತಿಳಿಸಲಾಗಿದೆ. ಆರಂಭದಲ್ಲಿ ಕಡಿಮೆ ಹಣ ಹೂಡಿಕೆ ಮಾಡಿ ಲಾಭ ಪಡೆದಿದ್ದರಿಂದ ನಂಬಿಕೆ ಗಟ್ಟಿಯಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು, ನವೆಂಬರ್ 4ರಿಂದ ನವೆಂಬರ್ 11ರವರೆಗೆ ಹಂತ ಹಂತವಾಗಿ ದೂರುದಾರರ ಹಾಗೂ ಅವರ ತಾಯಿಯ ಬ್ಯಾಂಕ್ ಖಾತೆಗಳಿಂದ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ (UPI) ಐಡಿಗಳಿಗೆ ಒಟ್ಟು ₹4,49,000 ಹಣವನ್ನು ಹೂಡಿಕೆ ಹೆಸರಿನಲ್ಲಿ ವರ್ಗಾಯಿಸಿಕೊಂಡಿದ್ದಾರೆ.

ನಂತರ ಹೆಚ್ಚಿನ ಲಾಭಾಂಶವನ್ನೂ ನೀಡದೆ, ಹಣವನ್ನೂ ವಾಪಸ್ ನೀಡದೆ ವಂಚನೆ ಎಸಗಿರುವುದು ಗೊತ್ತಾಗಿದೆ. ವಾಟ್ಸ್‌ಆ್ಯಪ್ ಹಾಗೂ ಟೆಲಿಗ್ರಾಂ ಗ್ರೂಪ್‌ಗಳ ಮೂಲಕ ಸಂಪರ್ಕಿಸಿ ಮೋಸ ಮಾಡಿರುವ ಅಪರಿಚಿತ ಸೈಬರ್ ವಂಚಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಕೋರಲಾಗಿದೆ.

Share This Article
Leave a Comment