ಉಡುಪಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಹೊಸದಿಲ್ಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸದಲ್ಲಿ ಉಡುಪಿಯ ಯುವ ಮುಖಂಡ ಅಜಯ್ ಪುರುಷೋತ್ತಮ್ ಶೆಟ್ಟಿ ಅವರು ಶುಕ್ರವಾರ (ನ.08) ಭೇಟಿಯಾಗಿ ರಾಷ್ಟ್ರೀಯ, ಸಾಂಸ್ಕೃತಿಕ ಹಾಗೂ ತಾಂತ್ರಿಕ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.


ಈ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣನ ವಿಗ್ರಹವನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ಸಮರ್ಪಿಸಿದರು. ಉಡುಪಿ ಶ್ರೀಕೃಷ್ಣನ ಬಗ್ಗೆ ತಮಗಿರುವ ವಿಶೇಷ ಭಕ್ತಿ ಹಾಗೂ ದ್ವಾರಕಾ-ಉಡುಪಿ ನಡುವಿನ ಪವಿತ್ರ ಸಂಬಂಧವನ್ನು ಮೋದಿಯವರು ಈ ವೇಳೆ ಸ್ಮರಿಸಿ, ಉಡುಪಿ ಆಧ್ಯಾತ್ಮಿಕ ಆನಂದದ ಪವಿತ್ರ ಕ್ಷೇತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2025ರಲ್ಲಿ ಉಡುಪಿಯಲ್ಲಿ ನಡೆದ ಲಕ್ಷ ಕಂಠಗಳ ಗೀತಾ ಪಾರಾಯಣ ಸಹಿತ ಭಾರತೀಯ ಪರಂಪರೆ ಹಾಗೂ ಉಡುಪಿ ಹಲವು ಆಧ್ಯಾತ್ಮಿಕ ವಿಶೇಷತೆಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು.

ಡಿಜಿಟಲ್ ಸ್ವರಾಜ್ಯ, ಸ್ವದೇಶಿ ಆಪರೇಟಿಂಗ್ ಸಿಸ್ಟಮ್, ಸಾಫ್ಟ್ವೇರ್ ಸ್ವಾವಲಂಬನೆ ಹಾಗೂ ಸಾಮಾಜಿಕ ಜಾಲತಾಣಗಳ ಅಲ್ಗಾರಿದಮ್ಗಳಿಂದ ಸಾರ್ವಜನಿಕ ಅಭಿಪ್ರಾಯದ ಮೇಲೆ ಉಂಟಾಗುವ ಪ್ರಭಾವದ ಬಗ್ಗೆಯೂ ಮಾತುಕತೆ ನಡೆಯಿತು. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಆಧ್ಯಾತ್ಮಿಕ ಮೌಲ್ಯಗಳ ಮಹತ್ವವನ್ನು ಮೋದಿ ಒತ್ತಿಹೇಳಿದರು.

ಭಾರತದ ತಳಮಟ್ಟದ ಜನರೊಂದಿಗೆ ಸಂಪರ್ಕ ಹೊಂದಿರುವುದು ಹಾಗೂ ಅವರ ನಾಡಿಮಿಡಿತ ಅರಿಯುವುದು ಮುಖ್ಯ. ಪ್ರತಿಯೊಂದು ಜವಾಬ್ದಾರಿಯನ್ನೂ ರಾಷ್ಟ್ರವನ್ನು ಕೇಂದ್ರದಲ್ಲಿಟ್ಟುಕೊಂಡು ಸಂಪೂರ್ಣ ಸಮರ್ಪಣೆಯಿಂದ ನಿರ್ವಹಿಸಬೇಕು ಎಂದು ಪ್ರಧಾನಿ ಸಲಹೆ ನೀಡಿದರು.
2016ರ ಸರ್ಜಿಕಲ್ ಸ್ಟೈಕ್ನಿಂದ ಆಪರೇಷನ್ ಸಿಂದೂರ್ವರೆಗಿನ ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಳನ್ನು ಸ್ಮರಿಸಿದ ಮೋದಿಯವರು, ಕಾರ್ಯಾಚರಣೆಯ ಫಲಿತಾಂಶ ಏನೇ ಇರಲಿ ನಮ್ಮ ಸೈನಿಕರು ಸೂರ್ಯೋದಯಕ್ಕೂ ಮುನ್ನ ಸುರಕ್ಷಿತವಾಗಿ ಹಿಂದಿರುಗಬೇಕು ಎಂದು ಸೂಚಿಸಿದ್ದ ಸಂಗತಿಯನ್ನು ಹಂಚಿಕೊಂಡರು. ಸೈನಿಕರ ಸುರಕ್ಷತೆಗೆ ತಾವು ನೀಡುವ ಆದ್ಯತೆ ವಿವರಿಸಿದರು.
ಈ ಸಂದರ್ಭದಲ್ಲಿ ಅಜಯ್ ಪಿ. ಶೆಟ್ಟಿಯವರು ಬಿಜೆವೈಎಂ ನಿಯತಕಾಲಿಕದ ‘ಸೇವಾ@25 – ಪ್ರಧಾನ್ ಸೇವಕ್, ವಿಕಸಿತ ಭಾರತ’ ವಿಶೇಷ ಸಂಚಿಕೆಯನ್ನು ಪ್ರಧಾನಿಯವರಿಗೆ ನೀಡಿದರು. ಅದರಲ್ಲಿ ಅಜಯ್ ಶೆಟ್ಟಿ ಬರೆದಿರುವ ‘ದಿ ಕರ್ತವ್ಯ ಜನರೇಷನ್’ ಲೇಖನವೂ ಪ್ರಕಟವಾಗಿದೆ. ಧನತ್ರಯೋದಶಿಯ ಶುಭಾಶಯ ಸಲ್ಲಿಸಿದ ಅವರು, ವಿಕಸಿತ ಭಾರತ 2047ರ ಗುರಿ ಸಾಕಾರಕ್ಕೆ ಪ್ರತಿಯೊಬ್ಬ ಭಾರತೀಯನೂ ಕೈಜೋಡಿಸಬೇಕು ಎಂದು ತಿಳಿಸಿದರು.



