ಉಡುಪಿ: ಪ್ರೀತಿಯ ಹೆಸರಿನಲ್ಲಿ ಎಂಟು ವರ್ಷಗಳ ಕಾಲ ಯುವಕನನ್ನು ನಂಬಿಸಿ, ಬಳಿಕ ತಿರಸ್ಕರಿಸಿದ್ದಲ್ಲದೆ, ನ್ಯಾಯ ಕೇಳಲು ಹೋದ ಆತನ ಮೇಲೆ ಹಾಡಹಗಲೇ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾಗಿ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿದರೂ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ ಪೊಲೀಸ್ ವ್ಯವಸ್ಥೆಯ ಧೋರಣೆಯೇ ಪೆರ್ಡೂರಿನ ಪ್ರದೀಪ್ ಪೂಜಾರಿ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಪೆರ್ಡೂರಿನಲ್ಲಿರುವ ಮೃತ ಪ್ರದೀಪ್ ಪೂಜಾರಿ ಅವರ ಮನೆಗೆ ಭೇಟಿ ನೀಡಿದ ಕಿಶೋರ್ ಕುಮಾರ್ ಪುತ್ತೂರು, ತಾಯಿ ಅಮೃತಾ ಅವರಿಗೆ ಸಾಂತ್ವನ ಹೇಳಿದರು. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಹಾಗೂ ಕುಟುಂಬದ ದುಃಖದ ಪರಿಸ್ಥಿತಿಯನ್ನು ಕಂಡು ಅವರು ಭಾವುಕರಾದರು.

ಬಡವನಾದ ಕಾರಣಕ್ಕೆ ವ್ಯವಸ್ಥೆಯ ನಿರ್ಲಕ್ಷ್ಯವೇ?:
ಪ್ರದೀಪ್ ಅವರ ಕುಟುಂಬದ ಆರ್ಥಿಕ ಸಂಕಷ್ಟ ಹಾಗೂ ಬಡತನವನ್ನು ಕಂಡಾಗ, ಬಡ ಕುಟುಂಬದ ಯುವಕನಾಗಿದ್ದ ಕಾರಣಕ್ಕಾಗಿಯೇ ವ್ಯವಸ್ಥೆ ಆತನನ್ನು ನಿರ್ಲಕ್ಷಿಸಿತೇ ಎಂಬ ಪ್ರಶ್ನೆ ಮೂಡುತ್ತದೆ. ಇದೇ ಘಟನೆ ಯಾವುದಾದರೂ ಶ್ರೀಮಂತ ಅಥವಾ ಪ್ರಭಾವಿ ಕುಟುಂಬದ ಯುವಕನಿಗೆ ಸಂಭವಿಸಿದ್ದರೆ ಪೊಲೀಸ್ ಇಲಾಖೆ ಇದೇ ರೀತಿ ನಿರ್ಲಕ್ಷ್ಯ ವಹಿಸುತ್ತಿತ್ತೇ ಎಂದು ಕಿಶೋರ್ ಕುಮಾರ್ ಪುತ್ತೂರು ಪ್ರಶ್ನಿಸಿದರು.

ಹಣಬಲ ಹಾಗೂ ಪ್ರಭಾವ ಹೊಂದಿರುವವರ ವಿಚಾರದಲ್ಲಿ ತಕ್ಷಣ ಸ್ಪಂದಿಸುವ ಪೊಲೀಸರು, ಹಲ್ಲೆಗೊಳಗಾಗಿ ರಕ್ತಸಿಕ್ತ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಡ ಯುವಕನ ದೂರನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದು ಏಕೆ? ಎಂದು ಅವರು ಪೊಲೀಸ್ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.

ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ:
ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಆರ್ಥಿಕ ಹಿನ್ನೆಲೆ ಅಥವಾ ಸಾಮಾಜಿಕ ಸ್ಥಾನಮಾನ ಆಧರಿಸಿ ನ್ಯಾಯ ನಿರ್ಧರಿಸುವುದು ಅಕ್ಷಮ್ಯ ಅಪರಾಧ. ನ್ಯಾಯ ಸಿಗದ ಅಸಹಾಯಕತೆಯಿಂದ ಪ್ರದೀಪ್ ಪ್ರಾಣ ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಹೇಳಿದರು.
ಪ್ರದೀಪ್ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಕೇವಲ ಕರ್ತವ್ಯಲೋಪವೆಂದು ಪರಿಗಣಿಸಿ ಮುಚ್ಚಿಹಾಕದೆ, ಯುವಕನ ದೂರನ್ನು ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿ, ಅವರನ್ನು ಅಮಾನತುಗೊಳಿಸಬೇಕು ಎಂದು ಗೃಹ ಇಲಾಖೆಯನ್ನು ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದ್ದಾರೆ.


