ಮಂಗಳೂರು: ಈ ವರ್ಷದ ಕರಾವಳಿ ಉತ್ಸವವನ್ನು ಡಿಸೆಂಬರ್ನಲ್ಲಿ ಅದ್ದೂರಿಯಾಗಿ ಆಯೋಜಿಸಲು ಸಿದ್ಧತೆ ನಡೆಸಲಾಗುತ್ತಿದ್ದು, ಕರಾವಳಿಯ ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.


ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ಸವವು ಸ್ಥಳೀಯರು, ಯುವಜನತೆ ಹಾಗೂ ಪ್ರವಾಸಿಗರನ್ನು ಆಕರ್ಷಿಸುವಂತಿರಬೇಕು. ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದರ ಜೊತೆಗೆ ರಾಷ್ಟ್ರೀಯ ಮಟ್ಟದ ಕಲಾವಿದರ ತಂಡಗಳ ಪ್ರದರ್ಶನಗಳನ್ನು ಆಯೋಜಿಸಬೇಕು ಎಂದು ತಿಳಿಸಿದರು.

ಈ ಬಾರಿ ಉತ್ಸವದಲ್ಲಿ ಹೆಲಿಕಾಪ್ಟರ್ ರೈಡ್, ಟ್ರಯಾಥ್ಲಾನ್, ವಿಂಟೇಜ್ ಕಾರ್ ರ್ಯಾಲಿ, ಬೈಕ್ ಸಾಹಸ ಪ್ರದರ್ಶನ, ಯೋಗಾಭ್ಯಾಸ ಸೇರಿದಂತೆ ಹಲವು ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ.

ಆಹಾರ ಮತ್ತು ತೋಟಗಾರಿಕೆಗೆ ಸಂಬಂಧಿಸಿದಂತೆ ಸ್ಟ್ರೀಟ್ ಫುಡ್ ಫೆಸ್ಟಿವಲ್, ಕರಾವಳಿ ಶೈಲಿಯ ಸೀಫುಡ್ ಉತ್ಸವ ಹಾಗೂ ಹಣ್ಣು ಮತ್ತು ಪುಷ್ಪ ಪ್ರದರ್ಶನ ಆಯೋಜಿಸಲಾಗುವುದು. ಇದರೊಂದಿಗೆ ಸಂಗೀತ ಕಾರ್ಯಕ್ರಮ, ರಸಮಂಜರಿ, ಚಲನಚಿತ್ರೋತ್ಸವ, ಜಾನಪದ ಉತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಜನರನ್ನು ರಂಜಿಸಲಿವೆ.
ನಾಯಿಗಳ ಪ್ರದರ್ಶನ, ಸ್ಥಳೀಯ ಜಾನುವಾರುಗಳ ಪ್ರದರ್ಶನ ಹಾಗೂ ಕರಾವಳಿಯ ಸಾಂಪ್ರದಾಯಿಕ ಕ್ರೀಡಾಕೂಟಗಳಿಗೂ ಆದ್ಯತೆ ನೀಡಲಾಗುವುದು. ಕಡಲತೀರಗಳಲ್ಲಿ ವಿಶೇಷ ಉತ್ಸವಗಳನ್ನು ಆಯೋಜಿಸುವ ಮೂಲಕ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶವಿದೆ. ಮಹಿಳೆಯರಿಗಾಗಿ ವಿಶೇಷ ಸ್ಪರ್ಧೆ ಮತ್ತು ವಿನೂತನ ಕಾರ್ಯಕ್ರಮಗಳನ್ನು ರೂಪಿಸುವಂತೆಯೂ ಸಚಿವರು ಸೂಚಿಸಿದರು.

ತುಳು ಭಾಷೆ ಮತ್ತು ಸಂಸ್ಕೃತಿಗೆ ವಿಶೇಷ ಒತ್ತು:
ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ದೊರೆತಿರುವ ಹಿನ್ನೆಲೆಯಲ್ಲಿ, ತುಳು ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅರ್ಥಪೂರ್ಣ ಹಾಗೂ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಸಭೆಯಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ್ ನಾರ್ವಾಡೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಅಪರ ಜಿಲ್ಲಾಧಿಕಾರಿ ರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


