ಬ್ರಹ್ಮಾವರ: ಕುಖ್ಯಾತ ರೌಡಿಶೀಟರ್ ಸುಜಿತ್ ಪಿಂಟೊ ಭೀಕರ ಕೊಲೆ- ರಿಕ್ಷಾ ಚಾಲಕ ಅರೆಸ್ಟ್..!

Prakhara News
1 Min Read

ಬ್ರಹ್ಮಾವರ : ಕರಾವಳಿಯ ಪ್ರಮುಖ ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಕುಖ್ಯಾತ ರೌಡಿಶೀಟರ್ ಸುಜಿತ್ ಪಿಂಟೊ (43) ಎಂಬಾತನನ್ನು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ಭೀಕರವಾಗಿ ಕೊಲೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಿತ್ ಮನೆಗೆ ದಿನಸಿ ಸಾಮಗ್ರಿಗಳನ್ನು ಪೂರೈಸುತ್ತಿದ್ದ ಆಟೋ ರಿಕ್ಷಾ ಚಾಲಕ ಪ್ರಮೋದ್ ಎಂಬಾತನನ್ನು ಬ್ರಹ್ಮಾವರ ಪೊಲೀಸರು ತಕ್ಷಣವೇ ವಶಕ್ಕೆ ಪಡೆದು ಬಂಧಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ (SP) ಹರಿರಾಮ್ ಶಂಕರ್ ಅವರು ನೀಡಿದ ಮಾಹಿತಿಯಂತೆ, ಕೊಲೆಯಾದ ರೌಡಿಶೀಟರ್ ಸುಜಿತ್ ಪಿಂಟೊ ರಿಕ್ಷಾ ಚಾಲಕ ಪ್ರಮೋದ್‌ಗೆ ಬಾಕಿ ಹಣ ಕೊಡಬೇಕಾಗಿತ್ತು. ಇದೇ ವಿಚಾರವಾಗಿ ಹಣ ಪಡೆಯಲು ಪ್ರಮೋದ್ ಸುಜಿತ್‌ನನ್ನು ತಾನು ಇದ್ದ ಸ್ಥಳಕ್ಕೆ ಕರೆಸಿಕೊಂಡಿದ್ದನು.

ಅಲ್ಲಿಗೆ ಸುಜಿತ್ ಪಿಂಟೊ ತೆರಳಿದ್ದು, ಇಬ್ಬರೂ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಮದ್ಯದ ಅಮಲಿನಲ್ಲಿ ಬಾಕಿ ಹಣದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ಹಾಗೂ ಹೊಡೆದಾಟ ನಡೆದಿದೆ. ಈ ವೇಳೆ ತೀವ್ರ ಕಂಟ್ರೋಲ್ ತಪ್ಪಿದ ಪ್ರಮೋದ್, ಕಬ್ಬಿಣದ ರಾಡಿನಿಂದ ಸುಜಿತ್ ಪಿಂಟೊ ತಲೆಗೆ ರಭಸವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸುಜಿತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಕೊಲೆಯಾದ ರೌಡಿಶೀಟರ್ ಸುಜಿತ್ ಪಿಂಟೊ ಕರಾವಳಿ ಭಾಗದಲ್ಲಿ ಸರಣಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ವ್ಯಕ್ತಿಯಾಗಿದ್ದಾನೆ. 2018ರ ಮಣಿಪಾಲ ಕ್ಲಬ್ ಮಾಲಕ ಗುರುಪ್ರಸಾದ್ ಭಟ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. 2020ರ ಮಲ್ಪೆ ಠಾಣಾ ವ್ಯಾಪ್ತಿಯ ತೆಂಕನಿಡಿಯೂರು ಲಕ್ಷ್ಮಿನಗರದ ಯೋಗೀಶ್ ಪೂಜಾರಿ ಕೊಲೆ ಪ್ರಕರಣದಲ್ಲೂ ಪ್ರಮುಖ ಆರೋಪಿಯಾಗಿದ್ದ. ಈತ ಮೂಲತಃ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೆಕಟ್ಟೆಯವನಾಗಿದ್ದು, ಕೆಲ ವರ್ಷಗಳ ಹಿಂದೆ ಬ್ರಹ್ಮಾವರಕ್ಕೆ ತನ್ನ ವಾಸಸ್ಥಳವನ್ನು ಬದಲಾಯಿಸಿದ್ದನು.

ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಕೊಲೆಗೆ ಬಳಸಿದ ಕಬ್ಬಿಣದ ರಾಡ್ ಜಪ್ತಿ ಮಾಡಲಾಗಿದ್ದು, ಆರೋಪಿ ಪ್ರಮೋದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS 2023) ಕಲಂ 103 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

Share This Article
Leave a Comment