ಕುಂದಾಪುರ: ಯುವಕ ಕವೀನಾ ನಾಯ್ಕ್ ಅನುಮಾನಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್..!

Prakhara News
2 Min Read

ಕುಂದಾಪುರ: ಕಾಣೆಯಾಗಿದ್ದ ಯುವಕನೊಬ್ಬ ತೋಟದ ತಂತಿ ಬೇಲಿಗೆ ನೀಡಲಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕ ತಾಗಿ ಸಾವನಪ್ಪಿದ ಪ್ರಕರಣ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಮಾತಿನಮಠ ಎಂಬಲ್ಲಿ ನಡೆದಿದೆ. ಸಾವಿನ ಸತ್ಯವನ್ನು ಮರೆಮಾಚಿ ಅಪಘಾತ ಅಥವಾ ಸ್ವಾಭಾವಿಕ ಸಾವು ಎಂಬಂತೆ ಬಿಂಬಿಸಲು ಯತ್ನಿಸಿದ ತೋಟದ ಮಾಲೀಕನ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಂಗಡಿ ಗ್ರಾಮದ ತಾರ್ಕಿಮಕ್ಕಿ ನಿವಾಸಿ ಕವೀನಾ (26) ಮೃತಪಟ್ಟ ಯುವಕ.

ಕವೀನಾ ಅವರು ಅಕ್ಟೋಬರ್ 2 ರಂದು ಹೊಸಂಗಡಿಯ ತಾರ್ಕಿಮಕ್ಕಿ ಕೆ.ಪಿ.ಸಿ. ಚೆಕ್ ಪೋಸ್ಟ್ ಬಳಿಯಿಂದ ಕಾಣೆಯಾಗಿದ್ದರು. ಈ ಕುರಿತು ಅವರ ಅಣ್ಣ ಪ್ರವೀಣ ನಾಯ್ಕ್ ಪೊಲೀಸರಿಗೆ ದೂರು ನೀಡಿದ್ದು, ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 5 ರಂದು ಕವೀನಾ ಅವರ ಹುಡುಕಾಟ ನಡೆಸುತ್ತಿದ್ದಾಗ, ಹೊಸಂಗಡಿ ಮಾತಿನಮಠದ ಶೇಖರ ನಾಯ್ಕ್ ಎಂಬುವರ ತೋಟದ ಬಳಿ ಶವವೊಂದು ಬಿದ್ದಿರುವ ಬಗ್ಗೆ ಪ್ರವೀಣ್ ಅವರಿಗೆ ಮಾಹಿತಿ ಲಭಿಸಿತ್ತು. ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅದು ಕವೀನಾ ಅವರ ಮೃತದೇಹ ಎಂಬುದು ದೃಢಪಟ್ಟಿತ್ತು.

ಶವವು ಅಂಗಾತವಾಗಿ ಬಿದ್ದಿದ್ದು, ಕೀಟಗಳು ಆವರಿಸಿದ್ದವು. ಅಲ್ಲದೆ, ಕವೀನಾ ಅವರ ಕಾಲಿನಲ್ಲಿ ಚಪ್ಪಲಿ ಇರಲಿಲ್ಲ ಮತ್ತು ಶವ ಸಿಕ್ಕ ಸ್ಥಳವು ಅವರ ಮನೆಗೆ ಹೋಗುವ ದಾರಿಯೂ ಆಗಿರಲಿಲ್ಲ. ಇದರಿಂದ ಅನುಮಾನಗೊಂಡ ಪ್ರವೀಣ್ ನಾಯ್ಕ್ ಅವರು ನೀಡಿದ ದೂರಿನನ್ವಯ ಪೊಲೀಸರು ಶಂಕಿತ ಸಾವು (UDR) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪೋಲಿಸರು ನಡೆಸಿದ ತೀವ್ರ ತನಿಖೆಯ ವೇಳೆ ನೈಜ ಸತ್ಯ ಬಯಲಾಗಿದೆ. ತೋಟದ ಮಾಲೀಕ ಶೇಖರ ನಾಯ್ಕ್ ಕಾಡುಪ್ರಾಣಿಗಳಿಂದ ಕೃಷಿ ರಕ್ಷಣೆಗಾಗಿ ತಮ್ಮ ವಾಸದ ಮನೆಯಿಂದಲೇ ಅಕ್ರಮವಾಗಿ ಕರೆಂಟ್ ಕನೆಕ್ಷನ್ ತೆಗೆದುಕೊಂಡು ತೋಟದ ತಂತಿ ಬೇಲಿಗೆ ಸಂಪರ್ಕ ನೀಡಿದ್ದರು.

ಅಕ್ಟೋಬರ್ 2 ರಂದು ರಾತ್ರಿ ಹಾಲ್ಕಲ್‌ನಿಂದ ಮನೆಗೆ ಮರಳುತ್ತಿದ್ದ ಕವೀನಾ, ಸಂಬಂಧಿಕರೊಬ್ಬರಿಗೆ ಹಣದ ತುರ್ತು ಅಗತ್ಯವಿದೆ ಎಂದು ತಿಳಿದು, ಶೇಖರ ನಾಯ್ಕ್ ಅವರ ಮನೆಗೆ ಹೋಗಲು ತೋಟದ ಮೂಲಕ ಹೆಜ್ಜೆ ಹಾಕಿದ್ದರು. ಈ ವೇಳೆ ತಂತಿ ಬೇಲಿಗೆ ಹರಿಯುತ್ತಿದ್ದ ಭಾರಿ ಪ್ರಮಾಣದ ವಿದ್ಯುತ್ ಸ್ಪರ್ಶಿಸಿ ಕವೀನಾ ಸ್ಥಳದಲ್ಲೇ ಮೃತಪಟ್ಟಿದ್ದರು.

ವಿದ್ಯುತ್ ಆಘಾತದಿಂದ ಯುವಕ ಮೃತಪಟ್ಟಿರುವುದು ತಿಳಿಯುತ್ತಿದ್ದಂತೆಯೇ ಆತಂಕಗೊಂಡ ಶೇಖರ ನಾಯ್ಕ್, ತೊಂದರೆಯಾಗುವ ಭಯದಿಂದ ಮೃತದೇಹದ ಅಡಿಯಲ್ಲಿದ್ದ ಎರಡು ತಂತಿಗಳನ್ನು ತುಂಡರಿಸಿ ಪಕ್ಕದ ಕಂಬಕ್ಕೆ ಸುತ್ತಿಟ್ಟಿದ್ದರು. ಬಳಿಕ ಕರೆಂಟ್ ಶಾಕ್‌ನಿಂದ ಸಾವನ್ನಪ್ಪಿದ ವಿಷಯವನ್ನು ಮರೆಮಾಚಿ, ಪರೋಕ್ಷವಾಗಿ ಸಂಬಂಧಿಕರ ಮೂಲಕ ಪ್ರವೀಣ್‌ಗೆ ಮೃತದೇಹ ಇರುವ ವಿಷಯ ಮುಟ್ಟಿಸಿದ್ದರು.
ತೋಟದ ತಂತಿ ಬೇಲಿಗೆ ನೇರವಾಗಿ ವಿದ್ಯುತ್ ಸಂಪರ್ಕ ನೀಡಿ ಉಂಟುಮಾಡಿದ ನಿರ್ಲಕ್ಷ್ಯ ಹಾಗೂ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದಡಿ ಶೇಖರ ನಾಯ್ಕ್ ವಿರುದ್ಧ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ (ಅಪರಾಧ ಕ್ರಮಾಂಕ 28/2026) ಬಿಎನ್‌ಎಸ್ ಹಾಗೂ ಭಾರತೀಯ ವಿದ್ಯುತ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Share This Article
Leave a Comment