ಮಂಗಳೂರು : ರಾಜ್ಯ ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪ್ರಕಟಿಸಿರುವ ದಸರಾ ರಜೆಯ ಅವಧಿಯಲ್ಲಿ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಿ, ಆ ರಜೆಯನ್ನು ಡಿಸೆಂಬರ್‌ನ ಕ್ರಿಸ್ಮಸ್ ಹಬ್ಬಕ್ಕೆ ವರ್ಗಾಯಿಸುವುದನ್ನು ವಿರೋಧಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಎಚ್ಚರಿಕೆ ನೀಡಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಶಿಕ್ಷಣ ಸಚಿವರು, ಡಿಡಿಪಿಐ (DDPI) ಹಾಗೂ ಬಿಇಒ (BEO) ಅವರಿಗೆ ಮನವಿ ಸಲ್ಲಿಸುವುದರ ಜೊತೆಗೆ, ರಜೆ ನಿಯಮ ಉಲ್ಲಂಘಿಸುವ ಶಾಲೆಗಳ ವಿರುದ್ಧ ಉಗ್ರ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರವು ಶಾಲಾ ಶೈಕ್ಷಣಿಕ ವೇಳಾಪಟ್ಟಿಯಂತೆ ದಸರಾ ಹಬ್ಬದ ಸಂದರ್ಭದಲ್ಲಿ ಕಡ್ಡಾಯವಾಗಿ 19 ರಿಂದ 20 ದಿನಗಳ ಅಧಿಕೃತ ರಜೆಯನ್ನು ಘೋಷಿಸಿದೆ. ಆದರೆ, ಹಲವು ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳು ಈ ರಜೆಯ ದಿನಗಳಲ್ಲಿ ಪರೀಕ್ಷೆಗಳನ್ನು ಇಡುವುದು, ತರಗತಿ ಹಾಗೂ ಪಠ್ಯ ಬೋಧನೆ ಮಾಡುವುದನ್ನು ಮುಂದುವರಿಸುತ್ತಿದ್ದು, ಇದು ಸರ್ಕಾರದ ನಿಯಮಾವಳಿಗಳ ನೇರ ಉಲ್ಲಂಘನೆಯಾಗಿದೆ.

ದಸರಾ ರಜೆಯನ್ನು ಕಡಿತಗೊಳಿಸಿ, ಡಿಸೆಂಬರ್‌ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ 10 ದಿನಗಳ ಕಾಲ ರಜೆಯನ್ನು ಶಿಫ್ಟ್ ಮಾಡಿಕೊಳ್ಳಲಾಗುತ್ತಿದೆ. ನಮ್ಮಲ್ಲಿ ಕ್ರಿಸ್ಮಸ್ ಡಿಸೆಂಬರ್ 25 ರಂದು ಸಾರ್ವಜನಿಕ ರಜೆಯಾಗಿ ಆಚರಣೆಯಾಗುತ್ತದೆ, ಅದಕ್ಕೆ ಒಂದು ದಿನದ ರಜೆ ಸೂಕ್ತ. ಅದನ್ನು ಹೊರತುಪಡಿಸಿ 10 ದಿನಗಳ ಸುದೀರ್ಘ ರಜೆ ನೀಡುವುದು ಮತ್ತು ಹಿಂದೂಗಳ ಪ್ರಮುಖ ಸಾಂಪ್ರದಾಯಿಕ ಹಬ್ಬವಾದ ದಸರಾ ಸಮಯದಲ್ಲಿ ಪರೀಕ್ಷೆಗಳನ್ನು ಇಡುವುದು ವಿದ್ಯಾರ್ಥಿಗಳು ಹಾಗೂ ಅವರ ಕುಟುಂಬಗಳ ಮೇಲೆ ತೀವ್ರ ಮಾನಸಿಕ ಒತ್ತಡ ಹೇರುವಂತಾಗುತ್ತದೆ ಎಂದು ಮುತಾಲಿಕ್ ಹೇಳಿದರು.
ಕಾನ್ವೆಂಟ್ ಶಾಲೆಗಳಲ್ಲಿ ಶೇಕಡಾ 99 ರಷ್ಟು ಹಿಂದೂ ವಿದ್ಯಾರ್ಥಿಗಳು ಓದುತ್ತಿದ್ದು, ಶೇಕಡಾ 99 ರಷ್ಟು ಶಿಕ್ಷಕ-ಶಿಕ್ಷಕಿಯರೂ ಕೂಡ ಹಿಂದೂಗಳೇ ಇದ್ದಾರೆ. ದಸರಾ ಹಬ್ಬದ ಸಮಯದಲ್ಲಿ ಪರೀಕ್ಷೆ ಇಟ್ಟರೆ ಇಡೀ ಕುಟುಂಬವು ಹಬ್ಬವನ್ನು ಸಂಭ್ರಮದಿಂದ ಆಚರಿಸಲು, ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಅಥವಾ ಪ್ರವಾಸ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಇದು ವಿದ್ಯಾರ್ಥಿಗಳಿಗೆ ಮಾಡುವ ದೊಡ್ಡ ದ್ರೋಹವಾಗಿದೆ.
ಕಳೆದ ವರ್ಷವೂ ಈ ಕುರಿತು ಶಿಕ್ಷಣ ಇಲಾಖೆಯ ಬಿಇಒ (BEO) ಮತ್ತು ಡಿಡಿಪಿಐಗಳಿಗೆ ಮನವಿ ನೀಡಲಾಗಿತ್ತು, ಕೆಲವೆಡೆ ನಿಯಮ ಉಲ್ಲಂಘಿಸಿದ ಅಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಬಾರಿಯೂ ಶಾಲೆಗಳು ದಸರಾ ರಜೆ ನೀಡದೆ ತರಗತಿ ಅಥವಾ ಪರೀಕ್ಷೆ ನಡೆಸಿದರೆ, ರಾಜ್ಯದ ಎಲ್ಲಾ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ಎದುರು ಧರಣಿ ಹಾಗೂ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಈ ಕೂಡಲೇ ಶಿಕ್ಷಣ ಸಚಿವರು ಮಧ್ಯಪ್ರವೇಶಿಸಿ ಕಠಿಣ ಸುತ್ತೋಲೆ ಹೊರಡಿಸಬೇಕು ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.

