ಶಾರ್ಜಾ: ಯುಎಇಯ ಶಾರ್ಜಾದಲ್ಲಿ ಕೊಲೆಗೀಡಾಗಿದ್ದ ಕುಂದಾಪುರ ಮೂಲದ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪತ್ನಿ ಮತ್ತು ಮಗ ನಾಪತ್ತೆಯಾಗಿದ್ದಾರೆ ಎಂಬ ಮಾಧ್ಯಮಗಳ ವರದಿಯನ್ನು ಶಾರ್ಜಾ ಪೊಲೀಸರು ಶುಕ್ರವಾರ ಅಧಿಕೃತವಾಗಿ ತಳ್ಳಿಹಾಕಿದ್ದಾರೆ.


ಕೊಲೆಯಾದ ವ್ಯಕ್ತಿಯ ಪತ್ನಿ ಹಾಗೂ ಮಗ ಈಗಾಗಲೇ ತಮ್ಮ ಸ್ವದೇಶಕ್ಕೆ (ಭಾರತಕ್ಕೆ) ಮರಳಿದ್ದಾರೆ ಎಂದು ಪೊಲೀಸ್ ಪ್ರಾಧಿಕಾರ ಸ್ಪಷ್ಟಪಡಿಸಿದೆ.ಅವರ ಕುಟುಂಬಸ್ಥರು ಕಾಣೆಯಾಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂಬ ಯಾವುದೇ ದೂರುಗಳು ಅಥವಾ ವರದಿಗಳು ದಾಖಲಾಗಿಲ್ಲ ಎಂದು ಶಾರ್ಜಾ ಪೊಲೀಸ್ ಇಲಾಖೆ ತಿಳಿಸಿದೆ.
ಪ್ರಕರಣದ ತನಿಖಾ ಪ್ರಕ್ರಿಯೆಯ ಕುರಿತು ವಿವರಣೆ ನೀಡಿರುವ ಶಾರ್ಜಾ ಪೊಲೀಸರು, “ಮೊದಲು ಕೊಲೆ ಎಂದು ಶಂಕಿಸಲಾದ ಸಾವಿನ ಕುರಿತು ವರದಿ ಸ್ವೀಕರಿಸಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ವಿಶೇಷ ಕ್ರಿಮಿನಲ್ ತನಿಖಾ ತಂಡಗಳು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದವು. ಬಳಿಕ ಪಬ್ಲಿಕ್ ಪ್ರಾಸಿಕ್ಯೂಷನ್ ಆದೇಶದಂತೆ ಮೃತದೇಹವನ್ನು ವಿಧಿವಿಜ್ಞಾನ (Forensic) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು” ಎಂದು ಹೇಳಿದ್ದಾರೆ.

ಸಂಗ್ರಹಿಸಿದ ಸಾಕ್ಷ್ಯಗಳು ಹಾಗೂ ಮಾಹಿತಿಯನ್ನು ತೀವ್ರ ವಿಶ್ಲೇಷಣೆಗೆ ಒಳಪಡಿಸಿದ ಬಳಿಕ ಅಪರಾಧ ಹೇಗೆ ನಡೆಯಿತು ಎಂಬುದನ್ನು ತನಿಖಾ ತಂಡ ಪತ್ತೆಹಚ್ಚಿದೆ. ಈ ಕೃತ್ಯದಲ್ಲಿ ಭಾಗಿಯಾದ ಶಂಕಿತರ ವಿರುದ್ಧ ಈಗಾಗಲೇ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಕರಣವನ್ನು ಮುಂದಿನ ಪ್ರಕ್ರಿಯೆಗೆ ಪಬ್ಲಿಕ್ ಪ್ರಾಸಿಕ್ಯೂಷನ್‌ಗೆ ಹಸ್ತಾಂತರಿಸಲಾಗಿದೆ ಎಂದು ಪ್ರಾಧಿಕಾರ ಮಾಹಿತಿ ನೀಡಿದೆ.
ಇದೇ ವೇಳೆ ಶಾರ್ಜಾ ಪೊಲೀಸರು ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ: ಅಧಿಕೃತ ಮೂಲಗಳ ಬಳಕೆ: ಯಾವುದೇ ಸುದ್ದಿ ಅಥವಾ ಮಾಹಿತಿಯನ್ನು ಪ್ರಸಾರ ಮಾಡುವ ಮೊದಲು ಕಡ್ಡಾಯವಾಗಿ ಅಧಿಕೃತ ಮೂಲಗಳಿಂದ ಪರಿಶೀಲಿಸಿಕೊಳ್ಳಬೇಕು.
ಸಾಮಾಜಿಕ ಜಾಲತಾಣಗಳಲ್ಲಿ ಹರಡಬೇಡಿ: ಸಾರ್ವಜನಿಕರನ್ನು ದಾರಿತಪ್ಪಿಸುವ ಹಾಗೂ ಕಾನೂನು ಪ್ರಕ್ರಿಯೆಯ ಹಾದಿಗೆ ಅಡ್ಡಿಪಡಿಸುವ ಯಾವುದೇ ಆಧಾರರಹಿತ ಸುದ್ದಿಗಳನ್ನು ಪೋಸ್ಟ್ ಮಾಡಬಾರದು.
ನಿಖರತೆಗೆ ಆದ್ಯತೆ ನೀಡಲು ಕರೆ: ಮಾಧ್ಯಮಗಳು ಮತ್ತು ಸುದ್ದಿ ವಾಹಿನಿಗಳು ವಾಸ್ತವಿಕ ಹಾಗೂ ನಿಖರ ಮಾಹಿತಿಗಾಗಿ ಕೇವಲ ಶಾರ್ಜಾ ಪೊಲೀಸರ ಅಧಿಕೃತ ಮಾಹಿತಿ ವಾಹಿನಿಗಳನ್ನೇ ಉಲ್ಲೇಖಿಸಬೇಕು ಎಂದು ಮನವಿ ಮಾಡಿದ್ದಾರೆ.
ವರದಿ ಮೂಲ – gulfnews.com ಮತ್ತು khaleejtimes.com

