ಉಡುಪಿ: ಶಿರ್ವ ಮತ್ತು ಉಡುಪಿ ನಗರ ಠಾಣೆ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತುಗಳ (Drugs) ಮಾರಾಟ ಮತ್ತು ದಾಸ್ತಾನು ಜಾಲವನ್ನು ಭೇದಿಸಲಾಗಿದ್ದು, ಒಟ್ಟು 9 ಮಂದಿ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ಅಲ್ನಾಜ್, ಅನಾಸ್, ಅಲ್ತಾಫ್, ಸ್ಟ್ಯಾನಿ ಸಂದೀಪ್, ಶಾಕೀಬ್, ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಹಾಗೂ ಶಿವಮೊಗ್ಗದ ಸಾಗರ ತಾಲೂಕಿನ ಶ್ರೀವತ್ಸ ಕೆ.ಜಿ. ಎಂದು ಗುರುತಿಸಲಾಗಿದೆ.


ಪಡುಬೆಳ್ಳೆಯಲ್ಲಿ ಮೊದಲ ದಾಳಿ: 9 ಮಂದಿ ಬಂಧನ, ಮೆಥಾಂಫೆಟಮೈನ್ ಜಪ್ತಿ:
ಸೆಪ್ಟೆಂಬರ್ 22ರಂದು ಸಂಜೆ ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಬಳಿ ಕಾರು ಮತ್ತು ಸ್ಕೂಟರ್ಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿದ ಶಿರ್ವ ಪೊಲೀಸರು, ಅಲ್ನಾಜ್ ಸೇರಿದಂತೆ 9 ಆರೋಪಿಗಳನ್ನು ಬಂಧಿಸಿದರು.
ಬಂಧಿತರಿಂದ ₹67,714 ಮೌಲ್ಯದ 1,354.28 ಗ್ರಾಂ ಗಾಂಜಾ, ₹1,30,960 ಮೌಲ್ಯದ 32.74 ಗ್ರಾಂ ತೂಕದ ಪ್ರಾಣಾಪಾಯಕಾರಿ ಮೆಥಾಂಫೆಟಮೈನ್ (Methamphetamine), ಕೃತ್ಯಕ್ಕೆ ಬಳಸಿದ 2 ಕಾರುಗಳು, 1 ಸ್ಕೂಟರ್, 9 ಮೊಬೈಲ್ಗಳು, 2 ತೂಕದ ಯಂತ್ರ ಹಾಗೂ ₹75,010 ನಗದನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸಿದ ಶಿರ್ವ ಪಿಎಸ್ಐ ಅನಿಲ್, ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತಂದು ಜಿಲ್ಲೆಯಲ್ಲಿ ಮಾರಾಟ ಮಾಡುತ್ತಿದ್ದರೆಂದು ಮಾಹಿತಿ ನೀಡಿದ್ದಾರೆ.

ಉಡುಪಿ ನಗರದಲ್ಲಿ ನಸುಕಿನ ವೇಳೆ ದಾಳಿ: 1.6 ಕೆಜಿ ಗಾಂಜಾ ವಶ:
ಮತ್ತೊಂದು ಪ್ರಕರಣದಲ್ಲಿ, ಉಡುಪಿ ನಗರ ಠಾಣೆಯ ಪಿಎಸ್ಐ ಭರತೇಶ್ ಕಂಕಣವಾಡಿಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಸೆಪ್ಟೆಂಬರ್ 23ರ ನಸುಕಿನ ವೇಳೆ 12:30ರ ಸುಮಾರಿಗೆ ಉಡುಪಿ ವಾದಿರಾಜ ರಸ್ತೆಯ ಮನೆಯೊಂದಕ್ಕೆ ದಾಳಿ ನಡೆಸಲಾಯಿತು. ಈ ವೇಳೆ ಗಾಂಜಾ ದಾಸ್ತಾನು ಇರಿಸಿದ್ದ ಶ್ರೀವತ್ಸ ಕೆ.ಜಿ. ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ₹83,000 ಮೌಲ್ಯದ 1.65 ಕೆಜಿ ಗಾಂಜಾ, ₹1,26,500 ನಗದು ಹಾಗೂ ಡಿಜಿಟಲ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಹಲವು ಹಳೆಯ ಅಪರಾಧಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು:
ಬಂಧಿತರಲ್ಲಿ ಹೆಚ್ಚಿನವರು ರೌಡಿಶೀಟರ್ಗಳು ಹಾಗೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ. ಇಮ್ತಿಯಾಜ್ ವಿರುದ್ಧ ಕೊಲೆ ಸೇರಿದಂತೆ ಒಟ್ಟು 8 ಪ್ರಕರಣಗಳು, ಅಜಯ್ ಕುಮಾರ್ ವಿರುದ್ಧ ದರೋಡೆ ಸೇರಿ 3, ಫೈಜಲ್ ವಿರುದ್ಧ 3, ಸ್ಟ್ಯಾನ್ಲಿ ಸಂದೀಪ್ ವಿರುದ್ಧ 1 ಹಾಗೂ ಸಂತೋಷ್ ದೇವಾಡಿಗ ವಿರುದ್ಧ ಗಾಂಜಾ ಸೇವನೆಯ 2 ಪ್ರಕರಣಗಳು ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.
ಉಡುಪಿ ನಗರ ಸಿಪಿಐ ಮಹೇಶ್ ಪ್ರಸಾದ್ ಪಿ. ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ನೇತೃತ್ವದಲ್ಲಿ, ಶಿರ್ವ ಪಿಎಸ್ಐ ಅನಿಲ್, ಉಡುಪಿ ಪಿಎಸ್ಐ ಭರತೇಶ್ ಕಂಕಣವಾಡಿ, ಕಾಪು ಪಿಎಸ್ಐ ಶುಭಕರ, ಸಿಇಎನ್ (CEN) ಮತ್ತು ಮಣಿಪಾಲ ಠಾಣೆಯ ಸಿಬ್ಬಂದಿಗಳು ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

