ಹೈದರಾಬಾದ್: ಆಸ್ಟನ್ ಮಾರ್ಟಿನ್ ಕಾರು ಢಿಕ್ಕಿಯಾಗಿ ಯುವತಿ ಸಾವು, ಸಂಸದನ ಪುತ್ರನ ವಿರುದ್ಧ ಎಫ್‌ಐಆರ್..!

Prakhara News
1 Min Read

ಹೈದರಾಬಾದ್ ಅಗಸ್ಟ್ 21: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಹೈಟೆಕ್ ಸಿಟಿ ಮಾಧಾಪುರ ಪ್ರದೇಶದಲ್ಲಿ ಅತಿವೇಗವಾಗಿ ಬಂದ ಕೋಟ್ಯಂತರ ರೂಪಾಯಿ ಮೌಲ್ಯದ ‘ಆಸ್ಟನ್ ಮಾರ್ಟಿನ್’ ಐಷಾರಾಮಿ ಕಾರು ಡಿಕ್ಕಿಯಾಗಿ 26 ವರ್ಷದ ಶೋರೂಂ ಉದ್ಯೋಗಿ ಯುವತಿಯೊಬ್ಬರು ದುರಂತ ಅಂತ್ಯ ಕಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಜನಸೇನಾ ಪಕ್ಷದ ರಾಜ್ಯಸಭಾ ಸಂಸದ ಲಿಂಗಮನೇನಿ ರಮೇಶ್ ಅವರ 21 ವರ್ಷದ ಪುತ್ರ ಲಿಂಗಮನೇನಿ ಸಂಜುಶ್ ವಿರುದ್ಧ ಸೈಬರಾಬಾದ್ ಪೊಲೀಸರು ಅತಿವೇಗ ಹಾಗೂ ರಫ್ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಒಡಿಶಾ ಮೂಲದ ಸಂತ್ರಸ್ತೆ ಭಾರತಿ ಮುಖಿ (26) ಇನಾರ್ಬಿಟ್ ಮಾಲ್‌ನಲ್ಲಿರುವ ಲೈಫ್‌ಸ್ಟೈಲ್ ಬಟ್ಟೆ ಮಳಿಗೆಯಲ್ಲಿ ಉದ್ಯೋಗಿಯಾಗಿದ್ದರು. ಆಗಸ್ಟ್ 16ರ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿ ಪೂಜಾ ಜೊತೆ ಊಟ ಮುಗಿಸಿ ಕೆಲಸದ ಸ್ಥಳಕ್ಕೆ ಹಿಂತಿರುಗುತ್ತಿದ್ದಾಗ ಮಾಲ್ ಮುಂಭಾಗ ರಸ್ತೆ ದಾಟುವಾಗ ಅತಿವೇಗದಲ್ಲಿ ಬಂದ ಆಸ್ಟನ್ ಮಾರ್ಟಿನ್ ಕಾರು ಇವರಿಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವಗೊಂಡ ಭಾರತಿ ಅವರನ್ನು ಅದೇ ಕಾರಿನಲ್ಲಿ ಜುಬಿಲಿ ಹಿಲ್ಸ್‌ನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106(1) ರ ಅಡಿಯಲ್ಲಿ (ನಿರ್ಲಕ್ಷ್ಯದ ಚಾಲನೆಯಿಂದ ಸಾವು) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಾಧವು ಜಾಮೀನು ನೀಡಬಹುದಾದ ವ್ಯಾಪ್ತಿಗೆ ಬರುವುದರಿಂದ ಹಾಗೂ ಶಿಕ್ಷೆಯ ಅವಧಿ 7 ವರ್ಷಕ್ಕಿಂತ ಕಡಿಮೆಯಿರುವುದರಿಂದ ಆರೋಪಿ ಲಿಂಗಮನೇನಿ ಸಂಜುಶ್‌ಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಸದ್ಯಕ್ಕೆ ಬಂಧಿಸಿಲ್ಲ ಎಂದು ಮಾಧಾಪುರ ಎಸಿಪಿ ಸಿ.ಹೆಚ್. ಶ್ರೀಧರ್ ತಿಳಿಸಿದ್ದಾರೆ.

Share This Article
Leave a Comment