ಕೋಲಾರ: ಜಿಲ್ಲೆಯ ಚೆನ್ನಸಂದ್ರ ಗ್ರಾಮದಲ್ಲಿ ಭೀಮನ ಅಮವಾಸ್ಯೆ ದಿನ ಗಂಡನ ಪೂಜೆ ಮಾಡುವ ಬದಲು ಆತನನ್ನೇ ಪತ್ನಿ ಇಹಲೋಕಕ್ಕೆ ಕಳಿಸಿದ ಘಟನೆ ನಡೆದಿದೆ.


ಮೃತ ಪತಿ ನಾರಾಯಣಸ್ವಾಮಿ (68) ಹಾಗೂ ಹಂತಕಿ ಪತ್ನಿ ಜಗದಾಂಭ (58) ಎನ್ನಲಾಗಿದೆ. ಇಬ್ಬರ ಮಧ್ಯೆ ಅಸಮಾಧಾನ ಊಂಟಾಗಿ ಇಬ್ಬರು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು.

ಆದರೆ ಕಳೆದ ಎರಡು ಮೂರು ದಿನದಿಂದ ಹಣಕ್ಕಾಗಿ ಪುಸಲಾಯಿಸಿ ಪತ್ನಿ ಪತಿಯನ್ನು ತೋಟದ ಮನೆಗೆ ಕರೆತಂದಿದ್ದಳು. ಭೀಮನ ಅಮವಾಸ್ಯೆಯ ರಾತ್ರಿ ಪತಿಗೆ ಊಟದಲ್ಲಿ 10 ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದು, ಆತ ಮಲಗಿದ ನಂತರ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.
ಪೊಲೀಸರು ವಿಚಾರಣೆ ನಡೆಸಿದಾಗ, ಜಮೀನು ಮಾರಾಟ ಮಾಡಿದ ಹಣವನ್ನು ತನ್ನ ಕೈಗೆ ಕೊಟ್ಟಿಲ್ಲ. ಅಲ್ಲದೇ ಇನ್ನುಳಿದ ಜಮೀನನ್ನು ಮಾರಾಟ ಮಾಡಿ ಬಿಡುತ್ತಾನೆಂದು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾಳೆ. ಈ ಸಂಬಂಧ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



