ತಿರುವನಂತಪುರಂ: ಅನಾಥ ಮತ್ತು ಸಂಕಷ್ಟದಲ್ಲಿರುವ ಶಿಶುಗಳಿಗೆ ಆಸರೆಯಾಗುವ ಉದ್ದೇಶದಿಂದ ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯು ಆರಂಭಿಸಿರುವ ‘ಅಮ್ಮತೊಟ್ಟಿಲ್’ (ಅಮ್ಮನ ತೊಟ್ಟಿಲು) ಯೋಜನೆಯು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಇತ್ತೀಚೆಗಷ್ಟೇ ತಿರುವನಂತಪುರಂನ ಕೇಂದ್ರದಲ್ಲಿ 1,000ನೇ ಮಗು ಸ್ವೀಕೃತವಾದ ಕೆಲವೇ ದಿನಗಳಲ್ಲಿ, ಕೋಝಿಕ್ಕೋಡ್ನ ಕೇಂದ್ರದಲ್ಲಿ 1,001ನೇ ಹೆಣ್ಣು ಮಗು ಆಶ್ರಯ ಪಡೆದಿದೆ.


ಕೋಝಿಕ್ಕೋಡ್ ಬೀಚ್ ಆಸ್ಪತ್ರೆ ಬಳಿಯ ಅಮ್ಮತೊಟ್ಟಿಲ್ನಲ್ಲಿ ಮಧ್ಯಾಹ್ನ 1.30 ರ ಸುಮಾರಿಗೆ 4.2 ಕೆಜಿ ತೂಕದ ಎರಡು ತಿಂಗಳ ಮಗು ಪತ್ತೆಯಾಗಿದ್ದು, ಅದಕ್ಕೆ ‘ಸಹಸ್ರಿಕಾ’ ಎಂದು ಹೆಸರಿಸಲಾಗಿದೆ. ಶನಿವಾರ ಮಗು ತೊಟ್ಟಿಲಿನಲ್ಲಿ ಬಿದ್ದ ತಕ್ಷಣವೇ ಪಕ್ಕದ ನರ್ಸಿಂಗ್ ಸ್ಟೇಷನ್ನಲ್ಲಿ ಅಲಾರಾಂ ಸದ್ದು ಮಾಡಿದ್ದು, ಸಿಬ್ಬಂದಿ ತಕ್ಷಣವೇ ಧಾವಿಸಿ ಮಗುವನ್ನು ತೀವ್ರ ನಿಗಾ ಘಟಕಕ್ಕೆ (ICU) ಸ್ಥಳಾಂತರಿಸಿದ್ದಾರೆ. ಮಗು ಆರೋಗ್ಯವಾಗಿದ್ದು, ವೈದ್ಯರ ಸಲಹೆ ಮೇರೆಗೆ ಶೀಘ್ರದಲ್ಲೇ ಡಿಸ್ಚಾರ್ಜ್ ಮಾಡಲಾಗುವುದು ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಅಡ್ವ. ಜಿ.ಎಲ್. ಅರುಣ್ ಗೋಪಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮಂಗಳವಾರ ಮುಂಜಾನೆ ತಿರುವನಂತಪುರಂನಲ್ಲಿರುವ ಸೌಲಭ್ಯಕ್ಕೆ ಬಂದ 2.57 ಕೆಜಿ ತೂಕದ 5 ದಿನಗಳ ಹೆಣ್ಣು ಮಗು ‘ಅಮ್ಮತೊಟ್ಟಿಲ್’ ಇತಿಹಾಸದಲ್ಲೇ 1,000ನೇ ಮಗುವಾಗಿ ದಾಖಲಾಗಿತ್ತು. ಸಂಸ್ಕೃತದಲ್ಲಿ 1,000 ಎಂಬ ಅರ್ಥ ಕೊಡುವ ‘ಸಹಸ್ರ’ ಎಂದು ಆ ಮಗುವಿಗೆ ನಾಮಕರಣ ಮಾಡಲಾಗಿದೆ.

ಡಿಸೆಂಬರ್ 2002 ರಲ್ಲಿ ನಾವು ಪಡೆದ ಮೊದಲ ಮಗು ಹೆಣ್ಣು, ಆಕೆಗೆ ‘ನಿತ್ಯ’ ಎಂದು ಹೆಸರಿಟ್ಟಿದ್ದೆವು. 100ನೇ ಮಗು ‘ಸತಶ್ರೀ’. ಈಗ 1,000ನೇ ಮಗುವೂ ಹೆಣ್ಣು ಮಗುವೇ ಆಗಿದೆ. ಸ್ವೀಕರಿಸಲ್ಪಡುವ ಬಹುತೇಕ ಹೆಣ್ಣು ಮಕ್ಕಳು ವೇಗವಾಗಿ ದತ್ತು ಪಡೆಯಲ್ಪಡುತ್ತಿದ್ದಾರೆ” ಎಂದು ಅರುಣ್ ಗೋಪಿ ಸಂತಸ ಹಂಚಿಕೊಂಡಿದ್ದಾರೆ.
ನವೆಂಬರ್ 14, 2002 ರಂದು ಕೇರಳದ ರಾಜಧಾನಿ ತಿರುವನಂತಪುರಂ ನಲ್ಲಿ ಮೊದಲ ಅಮ್ಮನತೊಟ್ಟಿಲು ವಿಶೇಷ ಯೋಜನೆ ಪ್ರಾರಂಭಿಸಲಾಗಿತ್ತು, “ನೀವು ತಾಯಿಯ ಮುಂದೆ ನಿಂತಿದ್ದೀರಿ – ಶಿಶುಗಳಿಗೆ ಆಶ್ರಯ. ನಿಮ್ಮ ಕೈಯಲ್ಲಿ ಮಗುವನ್ನು ಬೆಳೆಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದ್ದರೆ, ಮಗುವನ್ನು ತೊಟ್ಟಿಲಿನಲ್ಲಿರಿಸಿ…” ಎಂಬ ಸಂದೇಶದೊಂದಿಗೆ ಆರಂಭವಾದ ಈ ಸೌಲಭ್ಯವು ಸುಮಾರು 24 ವರ್ಷಗಳಿಂದ ನೂರಾರು ಶಿಶುಗಳಿಗೆ ಮರುಜೀವ ನೀಡಿದೆ.
ಕೇರಳ ರಾಜ್ಯದ 14 ತೊಟ್ಟಿಲುಗಳಲ್ಲಿ ತಿರುವನಂತಪುರಂ ಒಂದರಲ್ಲೇ ಗರಿಷ್ಠ 667 ಮಕ್ಕಳು ಆಶ್ರಯ ಪಡೆದಿದ್ದಾರೆ. ಸ್ವೀಕರಿಸಲಾದ 1,000 ಮಕ್ಕಳಲ್ಲಿ 319 ಹೆಣ್ಣು ಮಕ್ಕಳಾಗಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ 258 ಶಿಶುಗಳು ದತ್ತು ಹೋಗಿದ್ದು, ಈ ಪೈಕಿ 227 ಭಾರತದಲ್ಲಿದ್ದರೆ, 31 ಮಕ್ಕಳು ವಿದೇಶಗಳಲ್ಲಿ (ಅಮೆರಿಕ, ಸ್ವೀಡನ್ ಸೇರಿದಂತೆ) ತಮ್ಮ ಹೊಸ ಕುಟುಂಬಗಳೊಂದಿಗೆ ಬೆಳೆಯುತ್ತಿದ್ದಾರೆ.
ಪ್ರಸ್ತುತ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಬಳಿ ಇರುವ ಈ ಕೇಂದ್ರಗಳನ್ನು ಇನ್ನಷ್ಟು ಆಧುನೀಕರಣಗೊಳಿಸಲು ಮಂಡಳಿ ಮುಂದಾಗಿದೆ. ಆಸ್ಪತ್ರೆ ಅಭಿವೃದ್ಧಿ ಕಾಮಗಾರಿಗಳ ಕಾರಣದಿಂದ ಇಡುಕ್ಕಿ ಮತ್ತು ಕಣ್ಣೂರಿನಲ್ಲಿದ್ದ ತೊಟ್ಟಿಲುಗಳನ್ನು ತೆರವುಗೊಳಿಸಲಾಗಿದ್ದು, ವಯನಾಡಿನಲ್ಲೂ ನೂತನ ಕೇಂದ್ರ ನಿರ್ಮಿಸಲಾಗುತ್ತಿದೆ. ಈ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ‘ಹೈಟೆಕ್ ಅಮ್ಮತೊಟ್ಟಿಲ್’ ಸೌಲಭ್ಯಗಳು ತಲೆಯೆತ್ತಲಿವೆ ಎಂದು ರಾಜ್ಯ ಖಜಾಂಚಿ ಕೆ. ಜಯಪಾಲ್ ತಿಳಿಸಿದ್ದಾರೆ.
ಪರಿತ್ಯಕ್ತ ಶಿಶುಗಳನ್ನು ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ಸರ್ಕಾರಿ ಸಂಸ್ಥೆಗಳಿಗೆ ಹಸ್ತಾಂತರಿಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳು ತೀವ್ರ ಶ್ರಮಿಸುತ್ತಿದ್ದಾರೆ.


