ಮಂಗಳೂರು: “ನಾನಿಲ್ಲಿ ಭಾಷೆಯನ್ನು ಇಟ್ಟುಕೊಂಡು ಬ್ಯುಸಿನೆಸ್ ಮಾಡಲು ಬಂದಿಲ್ಲ. ಕೇವಲ ಪ್ರೀತಿಯಿಂದ ಇಲ್ಲಿಗೆ ಬಂದಿದ್ದೇನೆ. ನಿಮ್ಮೆಲ್ಲರ ಪ್ರೀತಿಯ ಆಶೀರ್ವಾದ ನಮ್ಮಿಬ್ಬರ ಮೇಲೆ ಇದ್ದರೆ ಸಾಕು, ಅದೇ ನನಗೆ ಸೂಪರ್ ಹಿಟ್” ಎಂದು ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿವ್ಯಕ್ತಪಡಿಸಿದ್ದಾರೆ.


ನಗರದಲ್ಲಿ ನಡೆದ “ಪಿಕ್ಚರ್ ” ಸಿನಿಮಾದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ನಟ ಗಣೇಶ್, ಕರಾವಳಿ ಹಾಗೂ ತುಳುನಾಡಿನ ಕಲಾ ಪ್ರೇಮಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಚಲನಚಿತ್ರ ಜೀವನದ ಆರಂಭದಿಂದಲೂ ಮಂಗಳೂರು ಹಾಗೂ ಕರಾವಳಿ ಭಾಗದೊಂದಿಗೆ ಇರುವ ಸುದೀರ್ಘ ಬಾಂಧವ್ಯವನ್ನು ಗಣೇಶ್ ನೆನಪಿಸಿಕೊಂಡರು. “ನನ್ನ ಮೊದಲ ಚಿತ್ರದ ನಿರ್ಮಾಪಕ ಜಗದೀಶ್ ಕೋಟ್ಯಾನ್ ಅವರು ಮಂಗಳೂರಿನವರು. ನಿರ್ದೇಶಕ ಎಂ.ಡಿ. ಶ್ರೀಧರ್ ಅವರು ಬ್ರಹ್ಮಾವರದವರು. ‘ಕಾಮಿಡಿ ಟೈಮ್’ ದಿನಗಳಿಂದಲೂ ಈ ಭಾಗದ ನಾಟಕಗಳು, ಹಿರಿಯ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರ ಸೇವೆ ಮತ್ತು ಕಲಾ ನೈಪುಣ್ಯತೆಯನ್ನು ಕಂಡು ಬೆರಗಾಗಿದ್ದೇನೆ” ಎಂದರು.

ತುಳು ಭಾಷೆಗೆ ಅಳಿಲು ಸೇವೆ

ಚಿತ್ರ ನಿರ್ಮಾಣ ಹಾಗೂ ಅದರಲ್ಲಿ ಕೆಲಸ ಮಾಡಿದ ಕಲಾವಿದರ ಶ್ರಮವನ್ನು ಕೊಂಡಾಡಿದ ಗಣೇಶ್, “ಒಂದು ಸಿನಿಮಾ ಅಂದಮೇಲೆ ಹಿಟ್ ಅಥವಾ ಫ್ಲಾಪ್ ಎನ್ನುವುದು ಮುಂದಿನ ವಿಚಾರ. ಆದರೆ ಈ ಸಿನಿಮಾವನ್ನು ಅತ್ಯಂತ ಪ್ರೀತಿಯಿಂದ ಮಾಡಿದ್ದೇವೆ. ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೋ ಅದು ದೇವರಿಗೆ ಬಿಟ್ಟಿದ್ದು. ಇದು ನಮ್ಮ ಕಡೆಯಿಂದ ತುಳು ಭಾಷೆಗೆ ಸಲ್ಲಿಸಿದ ಒಂದು ಅಳಿಲು ಸೇವೆ” ಎಂದು ಹೇಳಿದರು.
ಇದೇ ವೇಳೆ ಶಿಲ್ಪಾಗಣೇಶ್, ದೇವದಾಸ್ ಕಾಪಿಕಾಡ್, ಭೋಜರಾಜ ವಾಮಂಜೂರ್, ನಿತ್ಯಪ್ರಕಾಶ್, ಅಮೃತಾ, ಅರ್ಜುನ್ ಕಾಪಿಕಾಡ್ ಮತ್ತು ಚಿತ್ರತಂಡದ ನಟ-ನಟಿಯರು, ತಾಂತ್ರಿಕ ವರ್ಗ ಹಾಗೂ ಚಿತ್ರಕ್ಕೆ ಸಾಥ್ ನೀಡಿದ ಪ್ರಮುಖ ಗಣ್ಯರಿಗೆ ಧನ್ಯವಾದ ಸಲ್ಲಿಸಿದರು. ಅದೇ ರೀತಿ ಇದೆ ಆಗಸ್ಟ್ 7 ರಂದು “ಪಿಕ್ಚರ್” ಸಿನೆಮಾ ಬಿಡುಗಡೆಯಾಗಲಿದ್ದು ಮಂಗಳೂರು ಹಾಗು ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲೂ ಪ್ರದರ್ಶನ ಆಯೋಜಿಸುವ ಬಗ್ಗೆ ಮಾತುಕತೆ ನಡೆದಿದೆ ಎಂದು ತಿಳಿಸಿದರು.


