ಬೆಳ್ತಂಗಡಿ: ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿ..!

Prakhara News
1 Min Read

ಬೆಳ್ತಂಗಡಿ: ತಾಲೂಕಿನ ರೆಖ್ಯ ಗ್ರಾಮದ ನೇಲಡ್ಕ ಸಮೀಪದ ಮುಚ್ಚಿರಡ್ಕದಲ್ಲಿ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಶನಿವಾರ ಸಂಜೆ ನಡೆದಿದೆ. ಮೃತರನ್ನು ಇಡ್ಯಾಲು ನಿವಾಸಿ ಬಾಲಕೃಷ್ಣ ಗೌಡ (55) ಎಂದು ಗುರುತಿಸಲಾಗಿದೆ.

ಬಾಲಕೃಷ್ಣ ಗೌಡ ಅವರು ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಹಿಂದಿರುಗುವ ವೇಳೆ ಕಾಡಾನೆ ದಾಳಿಗೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ. ಸಂಜೆ ಕಳೆದರೂ ಅವರು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದರು. ಹುಡುಕಾಟದ ವೇಳೆ ಅವರು ಧರಿಸಿದ್ದ ಪ್ಲಾಸ್ಟಿಕ್ ರೈನ್‌ಕೋಟ್ ದಾರಿಯ ಮಧ್ಯೆ ಬಿದ್ದಿರುವುದು ಪತ್ತೆಯಾಯಿತು. ಅದರ ಸಮೀಪದಲ್ಲೇ ಕಾಡಾನೆಯ ಹೆಜ್ಜೆ ಗುರುತುಗಳು ಕಂಡುಬಂದಿದ್ದರಿಂದ ಕಾಡಾನೆ ದಾಳಿ ನಡೆಸಿರುವ ಶಂಕೆ ಮತ್ತಷ್ಟು ಬಲವಾಯಿತು.

ಬಳಿಕ ಸ್ಥಳೀಯರು ಸುತ್ತಮುತ್ತ ಶೋಧ ನಡೆಸಿದಾಗ ಸಮೀಪದ ಕಣಿಯೊಂದರಲ್ಲಿ ಬಾಲಕೃಷ್ಣ ಗೌಡ ಅವರ ಮೃತದೇಹ ಪತ್ತೆಯಾಯಿತು. ಕಾಡಾನೆ ದಾಳಿಯಿಂದಲೇ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

Share This Article
Leave a Comment