ಉಡುಪಿ : ನಕಲಿ ಸೈಬರ್ ಪೊಲೀಸ್ ಅಧಿಕಾರಿಯಂತೆ ನಟಿಸಿ ‘ಮನಿ ಲಾಂಡ್ರಿಂಗ್’ ಹಾಗೂ ಭಯೋತ್ಪಾದನೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹11 ಲಕ್ಷ ಹಣ ಪಡಕೊಂಡು ವಂಚಿಸಿರುವ ಡಿಜಿಟಲ್ ಅರೆಸ್ಟ್ ಘಟನೆ ಶಿರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಶಿರ್ವಾ ನಿವಾಸಿ ವಿಲ್ಲಿಯಮ್ ಪೌಲ್ ಕೊರೆಯ ವಂಚನೆಗೆ ಒಳಗಾದ ಸಂತ್ರಸ್ತ. ದಿನಾಂಕ 28/07/2026 ರಂದು ಮಧ್ಯಾಹ್ನ 2:00 ಗಂಟೆಗೆ ವಿಲ್ಲಿಯಮ್ ಅವರ ಮೊಬೈಲ್ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿಯಲ್ಲಿ ಮಾತನಾಡಿ, “ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಪಡೆದು, ಅದರಿಂದ 20 ಅಕ್ರಮ ಪ್ರಕರಣಗಳು ದಾಖಲಾಗಿವೆ. ಮನಿ ಲಾಂಡ್ರಿಂಗ್ ಹಾಗೂ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಪ್ರಕರಣದಲ್ಲೂ ನಿಮ್ಮ ಹೆಸರಿದೆ” ಎಂದು ಹೆದರಿಸಿದ್ದ. ಅಲ್ಲದೆ 6 ಜನರ ಫೋಟೋ ಕಳುಹಿಸಿ ಇವರ ಪರಿಚಯವಿದೆಯೇ ಎಂದು ಪ್ರಶ್ನಿಸಿ ಭಯದ ವಾತಾವರಣ ಸೃಷ್ಟಿಸಿದ್ದ.

ಬಳಿಕ ತಾನು ಮುಂಬೈನ ‘ಕೊಲಬಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮ್ಯಾಥ್ಯೂ’ ಎಂದು ಪರಿಚಯಿಸಿಕೊಂಡ ಮತ್ತೊಬ್ಬ ವಂಚಕ, ಪ್ರಕರಣದಿಂದ ಪಾರು ಮಾಡಲು ಕೂಡಲೇ ಹಣ ವರ್ಗಾಯಿಸುವಂತೆ ಸೂಚಿಸಿದ್ದ. ಇದರಿಂದ ತೀವ್ರ ಆತಂಕಕ್ಕೊಳಗಾದ ವಿಲ್ಲಿಯಮ್ ಅವರು ತಮ್ಮ ಯೂನಿಯನ್ ಬ್ಯಾಂಕ್ನ ಎರಡು ಖಾತೆಗಳಿಂದ ದಿನಾಂಕ 29/07/2026 ರಂದು ₹6 ಲಕ್ಷ ಹಾಗೂ ದಿನಾಂಕ 30/07/2026 ರಂದು ಬೆಳಿಗ್ಗೆ ₹5 ಲಕ್ಷ ಸೇರಿದಂತೆ ಒಟ್ಟು ₹11 ಲಕ್ಷ ಹಣವನ್ನು ವಂಚಕರು ನೀಡಿದ ಖಾತೆಗೆ ವರ್ಗಾಯಿಸಿದ್ದರು.

ತಾನು ಮೋಸ ಹೋಗಿರುವುದು ಅರಿವಿಗೆ ಬಂದ ಬಳಿಕ ವಿಲ್ಲಿಯಮ್ ಅವರು ಶಿರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಅಪರಿಚಿತ ಆರೋಪಿ ಮ್ಯಾಥ್ಯೂ ಹಾಗೂ ಇತರರ ವಿರುದ್ಧ ಶಿರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2026, ಬಿಎನ್ಎಸ್ (BNS) ಕಾಯ್ದೆಯ ಕಲಂ 316(2), 318(2) ಹಾಗೂ ಐಟಿ ಕಾಯ್ದೆಯ (IT Act) ಕಲಂ 66(C), 66(D) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.


