ವಿಟ್ಲ : ಬಹರೈನ್‌ನಿಂದ ವಾರದ ಹಿಂದೆಯಷ್ಟೇ ತವರೂರಿಗೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಕ್ರಿಕೆಟ್ ಆಡಿ ಮುಗಿಸಿ ಮನೆಗೆ ತೆರಳುವಷ್ಟರಲ್ಲಿ ತೀವ್ರ ಎದೆನೋವು ಕಾಣಿಸಿಕೊಂಡು ಮೃತಪಟ್ಟ ಘಟನೆ ಜುಲೈ 26ರಂದು ಸಂಭವಿಸಿದೆ.


ಕೇಪು ಗ್ರಾಮದ ಬೆಂಗ್ರೋಡಿ ಸೀತಾರಾಮ ಶೆಟ್ಟಿ ಹಾಗೂ ಪುಷ್ಪಾವತಿ ದಂಪತಿಯ ಪುತ್ರ ದಿವಾಕರ ಶೆಟ್ಟಿ (52) ಮೃತಪಟ್ಟ ದುರ್ದೈವಿ. ದಿವಾಕರ ಶೆಟ್ಟಿ ಅವರು ಬಹರೈನ್‌ನ ರೆಸ್ಟೋರೆಂಟ್ ಒಂದರಲ್ಲಿ ಉದ್ಯೋಗಿಯಾಗಿದ್ದು, ಉತ್ತಮ ಕ್ರಿಕೆಟ್ ಆಟಗಾರರೂ ಆಗಿದ್ದರು.

ವಾರದ ಹಿಂದಷ್ಟೇ ಊರಿಗೆ ಬಂದಿದ್ದ ಇವರು, ಜುಲೈ 26ರಂದು ಚಂದಳಿಕೆಯಲ್ಲಿರುವ ಒಳಾಂಗಣ ಕ್ರಿಕೆಟ್ ಮೈದಾನದಲ್ಲಿ (ಇಂಡೋರ್ ಗ್ರೌಂಡ್) ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಕ್ರಿಕೆಟ್ ಆಡಿದ್ದರು. ಆಟ ಮುಗಿಸಿ ಮನೆಗೆ ತೆರಳಲು ಸಿದ್ಧರಾಗುತ್ತಿದ್ದಾಗ ಅವರಿಗೆ ಹಠಾತ್ತನೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ವಿಟ್ಲದ ಖಾಸಗಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಲಾಯಿತಾದರೂ, ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಪರೀಕ್ಷಿಸಿದ ಪುತ್ತೂರಿನ ವೈದ್ಯರು ದಿವಾಕರ ಶೆಟ್ಟಿ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತರು ಪತ್ನಿ, ಪುತ್ರ, ತಂದೆ ಹಾಗೂ ತಾಯಿಯನ್ನು ಅಗಲಿದ್ದಾರೆ.



