ಡಿಜಿಟಲ್ ಅರೆಸ್ಟ್ ಹೆಸರಲ್ಲಿ ಭಾರಿ ಸೈಬರ್ ವಂಚನೆ: ಚಿನ್ನ ಅಡವಿಟ್ಟು ಸೈಬರ್ ವಂಚಕರಿಗೆ 31 ಲಕ್ಷಕೊಟ್ಟ ವೃದ್ದ..!

Prakhara News
2 Min Read

ಮಂಗಳೂರು ಜುಲೈ : ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಸಿಮ್ ಕಾರ್ಡ್ ಅಕ್ರಮ ಹಾಗೂ ಅಶ್ಲೀಲ ವಿಡಿಯೋ ಕಳುಹಿಸಿದ ಆರೋಪ ಹೊರಿಸಿ, 64 ವರ್ಷದ ವೃದ್ಧರೊಬ್ಬರನ್ನು ಬೆದರಿಸಿ ಒಟ್ಟು 31,00,000/-(ರೂ. 31 ಲಕ್ಷ) ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಭಾರಿ ವಂಚನೆ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ಜುಲೈ 15 ರಂದು ಮಧ್ಯಾಹ್ನ ದೂರದಾರರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಕರೆ ಮಾಡಿದ ವ್ಯಕ್ತಿ ತಾನು ‘ಡಾಟಾ ಪ್ರೊಟೆಕ್ಷನ್ ಬೋರ್ಡ್ ಆಫ್ ಇಂಡಿಯಾ’ದ (Data Protection Board of India) ಅಧಿಕಾರಿ ‘ಆರ್. ಕೆ. ಚೌಧರಿ’ ಎಂದು ಪರಿಚಯಿಸಿಕೊಂಡಿದ್ದ. “ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಕಾರ್ಡ್ ಪಡೆದು, ಮಕ್ಕಳೊಂದಿಗೆ ಅಶ್ಲೀಲ ಮೆಸೇಜ್ ಹಾಗೂ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಸಂಬಂಧ ನಿಮ್ಮ ವಿರುದ್ಧ 20 ದೂರುಗಳು ದಾಖಲಾಗಿವೆ” ಎಂದು ಬೆದರಿಸಿದ್ದ. ನಂತರ ಕರೆಯನ್ನು ಮುಂಬಯಿ ಸೈಬರ್ ಸೆಲ್ ಹಾಗೂ ಎನ್.ಐ.ಎ (NIA) ಗೆ ಕನೆಕ್ಟ್ ಮಾಡಲಾಗಿದೆ ಎಂದು ನಂಬಿಸಿ, ಎಫ್.ಐ.ಆರ್ (FIR) ದಾಖಲಾಗಿದೆ ಹಾಗೂ ವಿವಿಧ ರಾಜ್ಯಗಳಲ್ಲಿ ಕೇಸ್‌ಗಳಿವೆ ಎಂದು ಹೆದರಿಸಲಾಗಿತ್ತು. ಅದೇ ದಿನ 7037763411 ಸಂಖ್ಯೆಯಿಂದ ಬಂದ ವಿಡಿಯೋ ಕರೆಯಲ್ಲಿ ಮಾತನಾಡಿದ ‘ಸಂಜಯ್’ ಎಂಬ ವ್ಯಕ್ತಿ ಪ್ರಕರಣದ ತೀವ್ರತೆಯ ಬಗ್ಗೆ ಹೆದರಿಸಿದ್ದಾರೆ.

ಮರುದಿನ ಅಂದರೆ ಜುಲೈ 16 ರಂದು 7077489995 ಸಂಖ್ಯೆಯಿಂದ ವಿಡಿಯೋ ಕರೆ ಮಾಡಿದ ವಂಚಕರು ಪಿರ್ಯಾದಿದಾರರ ಆಸ್ತಿ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ಪಡೆದುಕೊಂಡಿದ್ದರು. ಜುಲೈ 17 ರಂದು ಅದೇ ಸಂಖ್ಯೆಯಿಂದ ಕರೆ ಮಾಡಿ, “ನಿಮ್ಮ ಹೆಸರಿನಲ್ಲಿ ವಾರಂಟ್ ಜಾರಿಯಾಗಿದೆ” ಎಂದು ನಂಬಿಸಿ, ಪರಿಶೀಲನೆ ನೆಪದಲ್ಲಿ ICICI ಬ್ಯಾಂಕ್ ಖಾತೆಗೆ RTGS ಮೂಲಕ 3,80,000 ವರ್ಗಾಯಿಸಿಕೊಂಡಿದ್ದರು. ಅಷ್ಟಕ್ಕೇ ಬಿಡದೆ , ಜುಲೈ 18 ರಂದು 6264041770 ಸಂಖ್ಯೆಯಿಂದ ವಾಟ್ಸಾಪ್ ಸಂದೇಶ ಕಳುಹಿಸಿ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅಡವಿಟ್ಟು ಹಣ ವರ್ಗಾಯಿಸುವಂತೆ ಸೂಚಿಸಿದ್ದರು. ಅದರಂತೆ ಪಿರ್ಯಾದಿದಾರರು ಜುಲೈ 20 ರಂದು ಮುತ್ತೂಟ್ ಫೈನಾನ್ಸ್‌ನಲ್ಲಿ ಚಿನ್ನಾಭರಣ ಅಡವಿಟ್ಟು ಪಡೆದ 29 ಲಕ್ಷ ಪೈಕಿ, 27,20,000/- ಹಣವನ್ನು ಮತ್ತೊಂದು ICICI ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ.ಒಟ್ಟಾರೆಯಾಗಿ 31,00,000/- ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವ ಅಪರಿಚಿತ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ. ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

Share This Article
Leave a Comment