ಕಠ್ಮಂಡು: 14 ವರ್ಷಗಳ ಹಿಂದೆ ಕುಟುಂಬವೊಂದರ ತಂದೆ-ತಾಯಿಯನ್ನು ತುಳಿದು ಕೊಂದಿದ್ದ ಅದೇ ಕಾಡಾನೆ, ವರ್ಷಗಳ ಬಳಿಕ ಕುಟುಂಬವನ್ನು ಹುಡುಕಿಕೊಂಡು ಬಂದು ಮತ್ತಿಬ್ಬರನ್ನು ಬಲಿ ಪಡೆದಿದೆ. ಸುರಕ್ಷತೆಗಾಗಿ ಊರು ಬದಲಿಸಿದ್ದರೂ, ಹುಡುಕಿ ಬಂದು ಕುಟುಂಬದ ನಾಲ್ವರನ್ನು ಬಲಿ ಪಡೆದಿರುವ ಘಟನೆ ನೇಪಾಳದಲ್ಲಿ ನಡೆದಿದೆ.


ಶನಿಚರ ಬೋಟೆ ಕುಟುಂಬ ನೇಪಾಳದ ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಡಿ ಪಟ್ಟಣದಲ್ಲಿ ವಾಸಿಸುತ್ತಿತ್ತು. 2012ರ ಡಿಸೆಂಬರ್‌ನಲ್ಲಿ ‘ಧುರ್ಬೆ’ ಎಂಬ ಹೆಸರಿನ ಕಾಡಾನೆ ಶನಿಚರ ಬೋಟೆಯವರ ತಂದೆ-ತಾಯಿಯನ್ನು ತುಳಿದು ಕೊಂದಿತ್ತು. ಈ ದುರಂತದ ನಂತರ ತಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ಶನಿಚರ ಬೋಟೆ ಸುಮಾರು 14 ಕಿಲೋಮೀಟರ್ ದೂರದ ಜಗತ್ಪುರ್ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು. ರಾಪ್ತಿ ನದಿಯನ್ನು ದಾಟಿ ಹೊಸ ಜೀವನ ಆರಂಭಿಸಿದರೆ ಆನೆಯ ಅಪಾಯದಿಂದ ಪಾರಾಗಬಹುದು ಎಂದು ಅವರು ನಂಬಿದ್ದರು.

ಆದರೆ ಹಲವು ವರ್ಷಗಳ ನಂತರ ಮತ್ತೆ ಅದೇ ಆನೆ ಅವರ ಮನೆಯತ್ತ ನುಗ್ಗಿದೆ. ಈ ತಿಂಗಳ ಆರಂಭದಲ್ಲಿ ಧುರ್ಬೆ ಜಗತ್ಪುರ್‌ನಲ್ಲಿರುವ ಅವರ ಮನೆಗೆ ದಾಳಿ ನಡೆಸಿ, ಶನಿಚರ ಬೋಟೆ ಅವರ 25 ವರ್ಷದ ಸೊಸೆ ಆಶಿಕಾ ಬೋಟೆ ಹಾಗೂ ನಾಲ್ಕು ವರ್ಷದ ಮೊಮ್ಮಗ ಭರತ್ ಬೋಟೆಯನ್ನು ತುಳಿದು ಕೊಂದಿದೆ.

ಘಟನೆಯ ಬಳಿಕ ಮಾತನಾಡಿದ ಶನಿಚರ ಬೋಟೆ, ದೊಡ್ಡ ನದಿಯನ್ನು ದಾಟಿ ಬಂದರೆ ನಾವು ಸುರಕ್ಷಿತರಾಗುತ್ತೇವೆ ಎಂದು ಭಾವಿಸಿದ್ದೆವು. ಆದರೆ ಇಷ್ಟು ವರ್ಷಗಳ ಬಳಿಕವೂ ಅದೇ ಆನೆ ನಮ್ಮನ್ನು ಹುಡುಕಿಕೊಂಡು ಬಂದು ಮನೆಗೆ ನುಗ್ಗಿ ನನ್ನ ಸೊಸೆ ಮತ್ತು ಪುಟ್ಟ ಮೊಮ್ಮಗನನ್ನು ಕಸಿದುಕೊಂಡಿದೆ. ಈಗ ನಾವು ಎಲ್ಲಿಗೆ ಓಡಿಹೋಗಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ದುಃಖ ವ್ಯಕ್ತಪಡಿಸಿದ್ದಾರೆ. ಈ ಘಟನೆಯೊಂದಿಗೆ ಕಳೆದ ಸುಮಾರು 14 ವರ್ಷಗಳಲ್ಲಿ ಒಂದೇ ಕುಟುಂಬದ ನಾಲ್ವರನ್ನು ಧುರ್ಬೆ ಆನೆ ಬಲಿ ಪಡೆದಂತಾಗಿದೆ.
ಇದುವರೆಗೆ 25 ಜನರನ್ನು ಕೊಂದ ಕರಾಳ ಇತಿಹಾಸ ಹೊಂದಿರೋ ‘ಧುರ್ಬೆ’:
ನೇಪಾಳದ ಅತ್ಯಂತ ಅಪಾಯಕಾರಿ ಕಾಡಾನೆಗಳಲ್ಲಿ ಧುರ್ಬೆ ಕೂಡ ಒಂದಾಗಿದೆ. ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳ ಪ್ರಕಾರ, 2010ರಿಂದ ಇದುವರೆಗೆ ಈ ಆನೆ ನಡೆಸಿದ ದಾಳಿಗಳಲ್ಲಿ 25 ಮಂದಿ ಮೃತಪಟ್ಟಿದ್ದಾರೆ.
ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಪ್ರತಿನಿಧಿ ಅಭಿನಾಶ್ ಥಾಪಾ ಮಗರ್ ಮಾತನಾಡಿ, ಈ ದುರಂತಕ್ಕೂ ಮುನ್ನ ಧುರ್ಬೆ 23 ಮಂದಿಯ ಸಾವಿಗೆ ಕಾರಣವಾಗಿತ್ತು. ಜಗತ್ಪುರ್‌ನಲ್ಲಿ ನಡೆದ ಇತ್ತೀಚಿನ ಎರಡು ಸಾವುಗಳೊಂದಿಗೆ ಈ ಸಂಖ್ಯೆಯು 25ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.
ಧುರ್ಬೆಯಿಂದ ಮತ್ತಷ್ಟು ಪ್ರಾಣಹಾನಿಯಾಗದಂತೆ ಅರಣ್ಯ ಇಲಾಖೆ ಹಲವು ವರ್ಷಗಳಿಂದ ಅದರ ಮೇಲೆ ನಿಗಾ ವಹಿಸುತ್ತಿದೆ. 2016ರಲ್ಲಿ ಈ ಆನೆಗೆ ಮೊದಲ ಬಾರಿ ಜಿಪಿಎಸ್ ಟ್ರ‍್ಯಾಕಿಂಗ್ ಕಾಲರ್ ಅಳವಡಿಸಲಾಗಿತ್ತು. ಬಳಿಕ ಅದು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ 2020ರಲ್ಲಿ ಹೊಸ ಕಾಲರ್ ಅಳವಡಿಸಲಾಯಿತು. ನಂತರ 2023ರಲ್ಲಿ ಮತ್ತೊಮ್ಮೆ ಟ್ರ‍್ಯಾಕಿಂಗ್ ಸಾಧನವನ್ನು ಬದಲಾಯಿಸಿ ಆನೆಯ ಚಲನವಲನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಆದರೂ ಧುರ್ಬೆಯ ದಾಳಿಗಳು ಮುಂದುವರಿದಿರುವುದು ನೇಪಾಳದ ಅರಣ್ಯ ಇಲಾಖೆ ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.


