ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಘೋಷಣೆಯಾಗಲಿ: ಸುಹೈಲ್ ಕಂದಕ್ ಆಗ್ರಹ

Prakhara News
2 Min Read

ಮಂಗಳೂರು: ಮಂಗಳೂರು ನಗರವು ಕರ್ನಾಟಕದ ಪ್ರಮುಖ ವಾಣಿಜ್ಯ, ಶೈಕ್ಷಣಿಕ, ವೈದ್ಯಕೀಯ ಹಾಗೂ ಆಡಳಿತಾತ್ಮಕ ಕೇಂದ್ರವಾಗಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ರಸ್ತೆ, ರೈಲು, ವಿಮಾನ ಹಾಗೂ ಬಂದರು ಸೇರಿದಂತೆ ಎಲ್ಲಾ ರೀತಿಯ ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ಮಂಗಳೂರು, ಕರಾವಳಿ ಕರ್ನಾಟಕದ ಪ್ರಮುಖ ಕೇಂದ್ರವಾಗಿದೆ. ಇಂತಹ ನಗರದಲ್ಲಿ ಕರ್ನಾಟಕ ಹೈಕೋರ್ಟ್‌ನ ಪೀಠವನ್ನು ಸ್ಥಾಪಿಸುವುದು ಕಾಲದ ಅಗತ್ಯವಾಗಿದೆ ಎಂದು ಸಾಮಾಜಿಕ ಮುಖಂಡ ಸುಹೈಲ್ ಕಂದಕ್ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಸೇರಿದಂತೆ ಕರಾವಳಿ ಹಾಗೂ ಮಲೆನಾಡಿನ ವಿವಿಧ ಜಿಲ್ಲೆಗಳ ಸಾವಿರಾರು ನಾಗರಿಕರು ತಮ್ಮ ನ್ಯಾಯಾಂಗ ಸಂಬಂಧಿತ ಪ್ರಕರಣಗಳಿಗಾಗಿ ಬೆಂಗಳೂರಿನವರೆಗೆ ತೆರಳಬೇಕಾಗಿರುವುದು ಸಮಯ ಹಾಗೂ ಆರ್ಥಿಕವಾಗಿ ದೊಡ್ಡ ಹೊರೆಯಾಗಿದೆ. ಅನೇಕ ಪ್ರಕರಣಗಳು ವರ್ಷಗಳ ಕಾಲ ಬಾಕಿ ಉಳಿಯುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯ ಜನರ ಹತ್ತಿರಕ್ಕೆ ತಲುಪಬೇಕಾದರೆ ಮಂಗಳೂರಿನಲ್ಲಿ ಹೈಕೋರ್ಟ್ ಪೀಠವನ್ನು ಘೋಷಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಹೈಕೋರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮಾಜಿ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜಿಲ್ಲೆಯ ಎಲ್ಲಾ ವಕೀಲರ ಸಂಘಗಳು ಈ ಬೇಡಿಕೆಗೆ ನಿರಂತರವಾಗಿ ಧ್ವನಿಯಾಗುತ್ತಿರುವುದು ಅಭಿನಂದನೀಯವಾಗಿದೆ.

ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ ಕರಾವಳಿ ಭಾಗದ ಜನರಿಗೆ ಶೀಘ್ರ ನ್ಯಾಯ ದೊರೆಯುವುದರ ಜೊತೆಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಮತ್ತಷ್ಟು ಬಲಗೊಳ್ಳಲಿದೆ. ಅಲ್ಲದೆ, ಜಿಲ್ಲೆಯ ಸಮಗ್ರ ಅಭಿವೃದ್ಧಿ, ಹೂಡಿಕೆ, ಆಡಳಿತಾತ್ಮಕ ಕಾರ್ಯಕ್ಷಮತೆ ಹಾಗೂ ಉದ್ಯೋಗಾವಕಾಶಗಳ ವೃದ್ಧಿಗೂ ಇದು ಮಹತ್ತರ ಕೊಡುಗೆ ನೀಡಲಿದೆ.

ಕರ್ನಾಟಕ ಸರ್ಕಾರವು ಕರಾವಳಿ ಭಾಗದ ಪ್ರವಾಸೋದ್ಯಮ, ಮೂಲಸೌಕರ್ಯ ಹಾಗೂ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಈ ಸಂದರ್ಭದಲ್ಲಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠವನ್ನು ಘೋಷಿಸುವ ಮೂಲಕ ಕರಾವಳಿ ಭಾಗದ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಿಸಬೇಕಾಗಿದೆ.

ಆದ್ದರಿಂದ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಹೈಕೋರ್ಟ್ ಈ ವಿಷಯಕ್ಕೆ ಅತ್ಯುನ್ನತ ಆದ್ಯತೆ ನೀಡಿ, ಶೀಘ್ರವೇ ಮಂಗಳೂರಿನಲ್ಲಿ ಹೈಕೋರ್ಟ್ ಪೀಠವನ್ನು ಘೋಷಿಸಬೇಕು ಎಂದು ಸುಹೈಲ್ ಕಂದಕ್ ಒತ್ತಾಯಿಸಿದ್ದಾರೆ.

Share This Article
Leave a Comment