ಕಡಬ : ಕಡಬ ತಾಲೂಕಿನ ಆಲಂಕಾರು ಸಮೀಪದ ಕಜೆ ಎಂಬಲ್ಲಿ ದಂಪತಿಯ ಮೃತದೇಹ ಬಾಡಿಗೆ ಮನೆಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ ಹೇಳಲಾಗಿದೆ, ಎರಡು ವರ್ಷದ ಹೆಣ್ಣು ಮಗು ಮನೆಯೊಳಗೆ ತಾಯಿಯ ಶವದ ಬಳಿ ಅಳುತ್ತಾ ನಿಂತಿದ್ದ ದೃಶ್ಯ ಸಾರ್ವಜನಿಕರ ಮನಕಲಕುವಂತೆ ಮಾಡಿದೆ.


ಬಜಗೋಳಿ ಮೂಲದ ದಿನೇಶ್ ಹಾಗೂ ಸಿದ್ದಕಟ್ಟೆ ನಿವಾಸಿ ಸಂಗೀತಾ ಮೃತಪಟ್ಟ ದಂಪತಿ ಎಂದು ಗುರುತಿಸಲಾಗಿದೆ. ಮೃತ ದಿನೇಶ್ ಅವರು ಆಲಂಕಾರು ಪೇಟೆಯಲ್ಲಿ ಹೋಟೆಲ್ ವ್ಯವಹಾರ ನಡೆಸುತ್ತಿದ್ದು, ಕಜೆಯ ಬಾಡಿಗೆ ಮನೆಯೊಂದರಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ವಾಸವಾಗಿದ್ದರು.

ಕಳೆದ ಕೆಲವು ದಿನಗಳಿಂದ ದಂಪತಿಯ ನಡುವೆ ತೀವ್ರ ಕುಟುಂಬ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಒಂದು ತಿಂಗಳ ಹಿಂದಷ್ಟೇ ಆಲಂಕಾರಿನಲ್ಲಿ ನಡೆಸುತ್ತಿದ್ದ ಹೋಟೆಲನ್ನು ಬಿಟ್ಟು ತೆರಳಿದ್ದ ಇವರು ಶುಕ್ರವಾರದಂದು ಅಲಂಕಾರಿನ ಕಜೆಯ ಬಾಡಿಗೆ ಮನೆಗೆ ಪುನಃ ಬಂದಿದ್ದರು. ಜೂ.20ರಂದು ಘಟನೆ ನಡೆದಿದ್ದು, ಮನೆಯ ಒಳಗಿನ ಚಿಲಕ ಹಾಕಲಾಗಿತ್ತು. ಶನಿವಾರ ಬೆಳಿಗ್ಗೆಯಾದರೂ ಮನೆಯಿಂದ ಯಾವುದೇ ಚಲನವಲನ ಕಾಣಿಸದಿದ್ದಾಗ ಅನುಮಾನಗೊಂಡ ಸ್ಥಳೀಯರು ಕಿಟಕಿಯಿಂದ ಇಣುಕಿ ನೋಡಿದಾಗ ಈ ಭೀಕರ ದುರಂತ ಬೆಳಕಿಗೆ ಬಂದಿದೆ.


ಮನೆಯ ಹಾಲ್‌ನಲ್ಲಿ ಸಂಗೀತಾ ಅವರು ಮೃತ ಸ್ಥಿತಿಯಲ್ಲಿ ಬಿದ್ದಿದ್ದರೆ, ದಿನೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಂದೆ-ತಾಯಿಯ ಸಾವಿನ ಅರಿವೇ ಇಲ್ಲದ 2 ವರ್ಷದ ಮಗು ಮನೆಯೊಳಗೆ ಪೋಷಕರಿಗಾಗಿ ಅಳುತ್ತಾ ಇರುವುದು ಕಂಡುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಡಬ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿನ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.


