ಮಂಗಳೂರು: ಜೋಕಟ್ಟೆಯಲ್ಲಿ ನಡೆದ ಕೊಲೆ ಪ್ರಕರಣ – ಇಬ್ಬರು ಆರೋಪಿಗಳ ಬಂಧನ

Prakhara News
2 Min Read

ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಅರಿಕೆರೆ ಪ್ರದೇಶದಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರವನ್ನು ಪಣಂಬೂರು ಪೊಲೀಸರು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜೂನ್‌ 10 ರಂದು ಬೆಳಗ್ಗೆ ಜೋಕಟ್ಟೆ ಅರಿಕೆರೆ ಸಮೀಪದ ಎಂಎಸ್‌ಇಝಡ್‌ಗೆ ಸೇರಿದ ನೀರು ಹರಿಯುವ ತೋಡಿನಲ್ಲಿ ಸುಮಾರು 35-40 ವರ್ಷದ ಅಪರಿಚಿತ ಗಂಡಸಿನ ಮೃತದೇಹವು ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.ಈ ಕುರಿತು ಕಿಶೋರ್ ಎಂಬವರು ನೀಡಿದ ದೂರಿನ ಮೇರೆಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು.

ತನಿಖೆಯ ವೇಳೆ ಮೃತನನ್ನು ಚಂದನ್‌ ಚೌಹಾನ್‌ (36) ಬಿಹಾರ ಮೂಲದ ನಿವಾಸಿ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್ ರನ್ನು ಜೂನ್‌13 ರಂದು ಬೆಳಗಿನ ಜಾವ 1.30 ಗಂಟೆಗೆ ಗೋವಾ ರಾಜ್ಯದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ಪಿಂಕೂ ಮಹ್ತೋ ನನ್ನು ವಿಜಯ ವಿಠಲ ಭಜನಾ ಮಂದಿರದ ಬಳಿಯ ಜೋಕಟ್ಟೆ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿದೆ.ಆರೋಪಿತ ಪ್ರಶಾಂತ್ ಕುಮಾರ್‌ನ ಪತ್ನಿಯು ಕಳೆದ ಎಪ್ರಿಲ್ ತಿಂಗಳಿನಲ್ಲಿ ಇನ್ನೋರ್ವ ಯುವಕನ ಜೊತೆಯಲ್ಲಿ ಮನೆ ಬಿಟ್ಟು ಹೋಗಿದ್ದು, ಆಕೆ ಮನೆ ಬಿಟ್ಟು ಹೋಗಲು ಪ್ರಕರಣದಲ್ಲಿ ಕೊಲೆಯಾದ ಚಂದನ್ ಚೌಹಾನ್ ಸಹಾಯ ಮಾಡಿದ್ದಾನೆ ಎಂಬ ಅನುಮಾನ ಪ್ರಶಾಂತ್ ಕುಮಾರ್ ಗೆ ಇತ್ತು. ಚಂದನ್ ಅಲ್ಲಿ ಇಲ್ಲಿ ಆರೋಪಿ ಪ್ರಶಾಂತನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ಇಬ್ಬರು ಆರೋಪಿಗಳು ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ಜೂನ್‌ 09 ರಂದು ಸಂಜೆ 6 ಗಂಟೆ ವೇಳೆ ಆರೋಪಿಗಳಿಬ್ಬರು ಚಂದನ್ ನ ತಲೆ, ಮುಖಕ್ಕೆ ಬಲವಾದ ದೊಣ್ಣೆಯಿಂದ ಹೊಡೆದು ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿ ಮೃತದೇಹವನ್ನು ತನ್ನ ಜೋಕಟ್ಟೆ ಬಾಡಿಗೆ ಮನೆಯ ಪಕ್ಕದಲ್ಲಿರುವ ತೋಡಿನಲ್ಲಿ ಬಿಸಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಈ ಪ್ರಕರಣವನ್ನು ಅತೀ ಶೀಘ್ರದಲ್ಲಿ ಭೇಧಿಸುವಲ್ಲಿ ಪಣಂಬೂರು ಪೊಲೀಸರು ಸಫಲರಾಗಿದ್ದು ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ.ಕೆ.ರವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್ ರವರು ಪ್ರಕರಣವನ್ನು ಭೇಧಿಸಿದ್ದಾರೆ. ಪಣಂಬೂರು ಪೊಲೀಸ್ ಠಾಣಾ ಉಪ ನಿರೀಕ್ಷಕರುಗಳಾದ ಶ್ರೀಕಲಾ ಕೆ.ಟಿ ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕಿರೇಶ್, ರಾಕೇಶ್,ಮಂಜುನಾಥ್ ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Share This Article
Leave a Comment