ಚೆನ್ನೈ : ಕರ್ನಾಟಕ ಕೇಡರ್ನ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಣ್ಣಾಮಲೈ ಅವರ ರಾಜೀನಾಮೆಯನ್ನು ಪಕ್ಷದ ಹೈಕಮಾಂಡ್ ಕೊನೆಗೂ ಅಂಗೀಕರಿಸಿದೆ. ಇದರೊಂದಿಗೆ ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಅಣ್ಣಾಮಲೈ ಅವರ ಆರು ವರ್ಷಗಳ ಬಿಜೆಪಿ ಸಖ್ಯ ಅಧಿಕೃತವಾಗಿ ಕೊನೆಗೊಂಡಿದೆ.


ಅಣ್ಣಾಮಲೈ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಅಂಗೀಕರಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ಖಚಿತಪಡಿಸಿವೆ. ಜೂನ್ 2 ರಂದು (ಮಂಗಳವಾರ) ದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಮತ್ತು ಕೇಂದ್ರ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗಿದ್ದ ಅಣ್ಣಾಮಲೈ, ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದರು. ಈ ವೇಳೆ ಹೈಕಮಾಂಡ್ ನಾಯಕರು ‘ರಾಜೀನಾಮೆ ನಿರ್ಧಾರವನ್ನು ಮರುಪರಿಶೀಲಿಸಿ’ ಎಂದು ಮನವಿ ಮಾಡಿದ್ದರಾದರೂ, ಅಣ್ಣಾಮಲೈ ತಮ್ಮ ನಿರ್ಧಾರಕ್ಕೆ ಪಟ್ಟು ಹಿಡಿದಿದ್ದರಿಂದ ಕೊನೆಗೂ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ.

2021 ರಿಂದ 2025 ರವರೆಗೆ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಆಕ್ರಮಣಕಾರಿ ರಾಜಕಾರಣ ಮಾಡಿದ್ದ ಅಣ್ಣಾಮಲೈ ಅವರನ್ನು ದ್ರಾವಿಡ ಸೀಮೆಯಲ್ಲಿ ಪಕ್ಷದ ಭವಿಷ್ಯ ಎಂದೇ ಬಿಂಬಿಸಲಾಗಿತ್ತು. ಆದರೆ, ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ (AIADMK) ಪಕ್ಷದ ಜೊತೆ ಬಿಜೆಪಿ ಹೈಕಮಾಂಡ್ ಮೈತ್ರಿ ಮಾಡಿಕೊಂಡಿದ್ದು ಅಣ್ಣಾಮಲೈ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಿದರೆ ಮಾತ್ರ ಪಕ್ಷ ಭವಿಷ್ಯದಲ್ಲಿ ಬೆಳೆಯಲು ಸಾಧ್ಯ ಎಂಬುದು ಅಣ್ಣಾಮಲೈ ಅವರ ದೃಢ ನಂಬಿಕೆಯಾಗಿತ್ತು.ಆದರೆ, ಹೈಕಮಾಂಡ್ ಎಐಎಡಿಎಂಕೆ ಜೊತೆ ಸೀಟು ಹಂಚಿಕೆ ಮಾಡಿಕೊಂಡ ರೀತಿ ಮತ್ತು ಬಿಜೆಪಿಗೆ ಕಡಿಮೆ ಸೀಟುಗಳನ್ನು ನೀಡಿದ ನಿರ್ಧಾರವನ್ನು ಅಣ್ಣಾಮಲೈ ಬಹಿರಂಗವಾಗಿಯೇ ಪ್ರಶ್ನಿಸಿದ್ದರು. ಮೈತ್ರಿ ನಿರ್ಧಾರವನ್ನು ‘ಇದು ಪಕ್ಷದ ಶವಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆ’ ಎಂದು ವರಿಷ್ಠರ ಎದುರೇ ಬೇಸರ ಹೊರಹಾಕಿದ್ದರು. ಅಂತಿಮವಾಗಿ ಚುನಾವಣೆಯಲ್ಲಿ ಮೈತ್ರಿಕೂಟವು ಸೋಲು ಕಂಡ ಬೆನ್ನಲ್ಲೇ ಅಣ್ಣಾಮಲೈ ಅವರು ಬಿಜೆಪಿಯಿಂದ ಹೊರನಡೆಯುವ ಕಠಿಣ ನಿರ್ಧಾರ ಕೈಗೊಂಡಿದ್ದಾರೆ.




