ಮಂಗಳೂರು : ನಗರದ ದೆರೆಬೈಲ್ ಗ್ರಾಮದ ಕೊಂಚಾಡಿ ಜಂಕ್ಷನ್ನಲ್ಲಿ ಕರ್ತವ್ಯ ನಿರತ ಹೊಯ್ಸಳ ಪೊಲೀಸ್ ಸಿಬ್ಬಂದಿಯ ಮೇಲೆ ಮೂವರು ವ್ಯಕ್ತಿಗಳು ಅವಾಚ್ಯ ಶಬ್ದಗಳಿಂದ ಬೈದು, ತಳ್ಳಾಡಿ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ವೇಳೆ ಪೊಲೀಸ್ ಸಿಬ್ಬಂದಿಯ ಎಡಗೈನ ಮಣಿಗಂಟು ಮುರಿತಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.


ಘಟನೆಗೆ ಸಂಬಂಧಿಸಿದಂತೆ ಪ್ರಸಾದ್, ಉದಯ ಮತ್ತು ಪ್ರಶಾಂತ್ ಎಂಬ ಮೂವರು ಆರೋಪಿಗಳ ವಿರುದ್ಧ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಹಲ್ಲೆ ಪ್ರಕರಣ ದಾಖಲಾಗಿದೆ. ಮೇ 17 ರಂದು ರಾತ್ರಿ ಕೊಂಚಾಡಿ ಜಂಕ್ಷನ್ನಲ್ಲಿರುವ ಬಾರ್ ಮತ್ತು ರೆಸ್ಟೊರೆಂಟ್ನಲ್ಲಿ ಗಲಾಟೆ ನಡೆಯುತ್ತಿರುವ ಬಗ್ಗೆ ಹೊಯ್ಸಳ ನಿಯಂತ್ರಣ ಕೊಠಡಿಗೆ ದೂರು ಕರೆ ಬಂದಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಹೊಯ್ಸಳ ಸಿಬ್ಬಂದಿ ಸಿಪಿಸಿ ಅಪ್ಪಣ್ಣ ಶೇಡಬಾಳ ಹಾಗೂ ಎಹೆಚ್ಸಿ ಭೀಮಾಶಂಕರ್ ಅವರು ಸ್ಥಳಕ್ಕೆ ಧಾವಿಸಿದ್ದಾರೆ. ಬಾರ್ನಿಂದ ಹೊರಬಂದಿದ್ದ ಮೂವರು ಆರೋಪಿಗಳನ್ನು ಸೆಕ್ಯೂರಿಟಿ ಸಿಬ್ಬಂದಿ ಗುರುತಿಸಿಕೊಟ್ಟಿದ್ದಾರೆ. ಪೊಲೀಸರು ಅವರನ್ನು ವಿಚಾರಿಸಲು ಹೋದಾಗ ಉಡಾಫೆ ಉತ್ತರ ನೀಡಿದ್ದಾರೆ.

ನಂತರ ಪಕ್ಕದ ಪಾನ್ ಶಾಪ್ ಬಳಿ ತೆರಳಿದ ಆರೋಪಿ ಪ್ರಸಾದ್, ಪೊಲೀಸರ ಎದುರೇ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಲು ಆರಂಭಿಸಿದ್ದಾನೆ. ಇದನ್ನು ಪ್ರಶ್ನಿಸಿ ಸಿಗರೇಟ್ ಬಿಸಾಡುವಂತೆ ಪೊಲೀಸರು ತಿಳಿಸಿದಾಗ, “ನಾವು ದುಡ್ಡು ಕೊಟ್ಟು ಸೇದುತ್ತಿದ್ದೇವೆ, ಕೇಳಲು ನೀನ್ಯಾರು?” ಎಂದು ದರ್ಪ ತೋರಿದ್ದಲ್ಲದೆ ಮೊಬೈಲ್ನಲ್ಲಿ ಪೊಲೀಸರ ವಿಡಿಯೋ ಚಿತ್ರೀಕರಣ ಮಾಡಲು ಶುರು ಮಾಡಿದ್ದಾನೆ. ಪೊಲೀಸರು ತಮ್ಮ ಮೊಬೈಲ್ ಆನ್ ಮಾಡಿದಾಗ, ಉಳಿದ ಇಬ್ಬರು ಆರೋಪಿಗಳಾದ ಉದಯ ಮತ್ತು ಪ್ರಶಾಂತ್ ಪೊಲೀಸರನ್ನು ತಡೆದು ನಿಲ್ಲಿಸಿ, “ನಾವು ಇಲ್ಲಿಂದ ಹೋಗುವುದಿಲ್ಲ, ನೀವೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ” ಎಂದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಅಷ್ಟಕ್ಕೇ ನಿಲ್ಲದೆ ಆರೋಪಿ ಪ್ರಸಾದ್ ಪೊಲೀಸರಿಗೆ “ಬೆವರ್ಸಿಗಳು” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸಿಪಿಸಿ ಅಪ್ಪಣ್ಣ ಅವರನ್ನು ಬಲವಾಗಿ ನೆಲಕ್ಕೆ ದೂಡಿದ್ದಾನೆ. ಪರಿಣಾಮವಾಗಿ ಅಪ್ಪಣ್ಣ ಅವರ ಎಡಗೈನ ಮಣಿಗಂಟಿಗೆ ತೀವ್ರ ಪೆಟ್ಟಾಗಿದ್ದು, ತಕ್ಷಣ ಅವರನ್ನು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಮಣಿಗಂಟಿನ ಮೂಳೆ ಮುರಿತಕ್ಕೊಳಗಾಗಿದ್ದು (Fracture), ಶಸ್ತ್ರಚಿಕಿತ್ಸೆ ನಡೆಸಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ.


