ಮಂಗಳೂರು : ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೆಲವೆಡೆ ಖಾಸಗಿ ಸಿಟಿ ಬಸ್ ಗಳು ಸೇರಿದಂತೆ ಕೆ.ಎಸ್.ಆರ್.ಟಿ.ಸಿ ಬಸ್ ಗಳು ನಿಗದಿತ ಸ್ಥಳಕ್ಕೆ ಹೋಗದಿರುವುದು ಹಾಗೂ ಟ್ರಿಪ್ ಕಡಿತಗೊಳಿಸುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುತ್ತಿರುವ ಕುರಿತು ಹಲವು ದೂರುಗಳು ಸ್ವೀಕೃತವಾದ ಹಿನ್ನಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ರವರು ಆರ್.ಟಿ.ಒ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ, ಬಸ್ ಸಂಘದವರ, ಸಾರ್ವಜನಿಕರ ವಿಶೇಷ ಸಭೆ ನಡೆಸಿದರು.


ಈ ವೇಳೆ ಮಾತನಾಡಿದ ಶಾಸಕರು, ಹಲವಾರು ವರ್ಷಗಳಿಂದ ಇಲ್ಲಿನ ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಉತ್ತಮ ರೀತಿಯಲ್ಲಿ ಸಾರ್ವಜನಿಕ ಸೇವೆ ನೀಡುತ್ತಿವೆ. ಅದರ ನಡುವೆ ವಾರ್ಡ್ ಸಂಖ್ಯೆ 51 ರ ಸರಿಪಲ್ಲ-ಕನ್ನಗುಡ್ಡೆ, ವಾರ್ಡ್ ಸಂಖ್ಯೆ 53 ರ ಬಜಾಲ್ ಪಡ್ಪು ಪಳ್ಳಕೆರೆ, ಸೇರಿದಂತೆ ಶಕ್ತಿನಗರ, ಮರೋಳಿ ಭಾಗದಲ್ಲಿ ಪರ್ಮಿಟ್ ಇದ್ದರೂ ಬಸ್ ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಇಲ್ಲಿನ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಶಾಲಾ ಕಾಲೇಜು, ಆಸ್ಪತ್ರೆ, ಕಚೇರಿ, ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ಬಸ್ ಸಂಚಾರವೇ ಆಧಾರವಾಗಿರುವುದರಿಂದ ಬಸ್ ಸಂಘದವರು, ಅಧಿಕಾರಿಗಳು ಅತ್ಯಂತ ಮುತುವರ್ಜಿಯಿಂದ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದರು.

ಈ ಬಗ್ಗೆ ದ.ಕ ಬಸ್ ಮಾಲಕರ ಸಂಘ, ಆರ್.ಟಿ.ಒ, ಸೇರಿದಂತೆ ಹಾಗೂ ಅಧಿವೇಶನದಲ್ಲಿಯೂ ವಿಷಯ ಪ್ರಸ್ತಾಪಿಸಿದ್ದೆ. ಇದೀಗ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರೇ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಸುವಂತೆ ಆರ್ ಟಿ ಓ ನ ಹಿರಿಯ ಅಧಿಕಾರಿಗಳಿಗೆ ಆದೇಶಿಸಿದ್ದು, ಅದರಂತೆ ಮಹತ್ವದ ಸಭೆ ನಡೆದು “ಮುಂದಿನ 15 ದಿನಗಳ ಒಳಗಾಗಿ ಕೆಎಸ್ಆರ್ಟಿಸಿ ಹಾಗೂ ಖಾಸಗಿ ಬಸ್ ಗಳು ನಿಗದಿಪಡಿಸಿರುವ ರೂಟ್ ಗಳಲ್ಲಿ ಕಡ್ಡಾಯವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಲಾಗುವುದು, ಇಲ್ಲದಿದ್ದಲ್ಲಿ ಅಂತಹ ಪರ್ಮಿಟ್ ಗಳನ್ನು ಹಸ್ತಾಂತರ ಮಾಡುವ ಪ್ರಕ್ರಿಯೆ ನಡೆಸಲಾಗುವುದು” ಎಂಬ ಆರ್ ಟಿ ಒ ಅಧಿಕಾರಿಗಳ ಹೇಳಿಕೆಗೆ ಎಲ್ಲರೂ ಸಹಮತ ವ್ಯಕ್ತಪಡಿಸಿರುವುದು ಸ್ವಾಗತಾರ್ಹ ಎಂದರು.


ಅದರ ಜೊತೆಗೆ ಮಂಗಳಾದೇವಿ ಸರ್ಕಲ್ ಬಳಿ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಿಸಲಾಗಿರುವ ಬಸ್ ಬೇ ನಲ್ಲೇ ಎಲ್ಲಾ ಬಸ್ ಗಳು ನಿಲುಗಡೆ ಮಾಡಬೇಕು, ಆರ್.ಟಿ.ಒ ದಲ್ಲಿ ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆಗೆ ಮುಕ್ತಿ ನೀಡಬೇಕು, ನಾಗರಿಕ ಹಿತರಕ್ಷಣಾ ಸಮಿತಿಯ ಹನುಮಂತ ಕಾಮತ್ ರವರು ಪ್ರಸ್ತಾಪಿಸಿದ ಜನಪರ ವಿಚಾರಗಳ ಬಗ್ಗೆ ಆದ್ಯತೆಯ ಮೇರೆಗೆ ಗಮನಹರಿಸಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಕೆ.ಎಸ್.ಆರ್.ಟಿ.ಸಿ ಯ ಡಿ.ಸಿ ರಾಜೇಶ್, ಆರ್.ಟಿ.ಒ ಹಿರಿಯ ಅಧಿಕಾರಿಗಳು, ಬಸ್ ಸಂಘದ ಪ್ರಮುಖರಾದ ಅಜೀಜ್ ಪರ್ತಿಪಾಡಿ, ರಾಜೇಂದ್ರ ವರ್ಮಾ ಬಲ್ಲಾಳ್, ರಾಮಚಂದ್ರ, ನವನೀತ, ಮೊಹಮ್ಮದ್ ವಾಸೀಮ್, ಸಾರ್ವಜನಿಕರ ಪರವಾಗಿ ಪ್ರವೀಣ್ ನಿಡ್ಡೆಲ್, ದೀಪಕ್ ಮರೋಳಿ, ಚಂದ್ರಶೇಖರ ಬಜಾಲ್, ಪ್ರಶಾಂತ್ ಆಳ್ವ, ರವಿಚಂದ್ರ, ಪ್ರಸಾದ್, ಸೇರಿದಂತೆ ಹಲವರು ಉಪಸ್ಥಿತರಿದ್ದರು


