ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ರಬ್ಬರ್ ತೋಟವೊಂದರಲ್ಲಿ ಅಸ್ಥಿಪಂಜರ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆ ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.


ಅರಳಿಕೊಪ್ಪ ಗ್ರಾಮದ ನಿವಾಸಿ ಎಲ್ಡೋ ಎಂಬುವವರಿಗೆ ಸೇರಿದ ರಬ್ಬರ್ ತೋಟದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ಶವವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕೇವಲ ಮೂಳೆಗಳು ಮಾತ್ರ ಉಳಿದಿವೆ. ಈ ಭೀಕರ ದೃಶ್ಯವನ್ನು ಕಂಡ ತೋಟದ ಕೆಲಸಗಾರರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಕಾರ್ಮಿಕ ಬಿಬಿನ್ ಎನ್ನುವವನದೇ ಇರಬಹುದು ಎಂದು ಶಂಕಿಸಲಾಗಿದೆ. ಬಿಬಿನ್ ಇದೇ ಎಲ್ಡೋ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದನು. ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಬಿಬಿನ್ ಬಳಸುತ್ತಿದ್ದ ಜರ್ಕಿನ್ ಪತ್ತೆಯಾಗಿರುವುದು ಈ ಶಂಕೆಯನ್ನು ಬಲಪಡಿಸಿದೆ. ಬಿಬಿನ್ ಸಂಬಂಧಿಕರು ಈಗಾಗಲೇ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಆತನ ಹತ್ಯೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಹಾಗೂ ಎನ್.ಆರ್. ಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎಫ್‌ಎಸ್‌ಎಲ್ ತಂಡದ ಸಹಾಯದಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


