ಲಾಕ್‌ಡೌನ್ ಸಮಯದಲ್ಲಿ ತಂದೆ-ಮಗನ ಲಾಕಪ್ ಡೆತ್ ಪ್ರಕರಣ; ತಮಿಳುನಾಡಿನ 9 ಪೊಲೀಸರಿಗೆ ಮರಣದಂಡನೆ.!

Prakhara News
2 Min Read
???????

ಚೆನ್ನೈ: ತಮಿಳುನಾಡಿನಲ್ಲಿ 2020ರಲ್ಲಿ ನಡೆದ ಸಾತಂಕುಲಂ ಪೋಲೀಸ್ ಕಸ್ಟಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮದ್ರಾಸ್ ಹೈಕೋರ್ಟ್‌ ಪೀಠವು 9 ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಮೂಲಕ ಮಹತ್ವದ ತೀರ್ಪು ಪ್ರಕಟಿಸಿದೆ.‌

ದೇಶಾದ್ಯಂತ ಸಂಚಲನ ಮೂಡಿಸಿದ್ದ ತಮಿಳುನಾಡಿನ ಸಾತಂಕುಲಂ ಪೋಲಿಸ್ ಕಸ್ಟಡಿ ಸಾವಿನ ಪ್ರಕರಣದಲ್ಲಿ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ತಂದೆ ಮತ್ತು ಮಗನನ್ನು ಅನ್ಯಾಯವಾಗಿ ಕೊಂದ 9 ಮಂದಿ ಪೊಲೀಸರಿಗೆ ಮಧುರೈನ ವಿಶೇಷ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಖಾಕಿಗಳ ವರ್ತನೆಗೆ ನ್ಯಾಯಾಲಯವು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,ಇದನ್ನು ಅತ್ಯಂತ ಅಪರೂಪದ ಅಪರಾಧ ಎಂದು ಕರೆದಿರುವ ನ್ಯಾಯಾಲಯ ಇದು ಅತ್ಯಂತ ಕ್ರೂರತೆ ಮತ್ತು ಅಧಿಕಾರ ದುರುಪಯೋಗವನ್ನು ಸಾಬೀತುಪಡಿಸುತ್ತದೆ.  ಮಾನವೀಯತೆಯ ಜ್ವಾಲೆಗಳನ್ನು ಹೊತ್ತಿಸಿದೆ ಎಂದಿದೆ.

ಜೂನ್ 19, 2020 ರಂದು, ತೂತುಕುಡಿ ಜಿಲ್ಲೆಯ ಸಾತಂಕುಲಂ ನಿವಾಸಿ ಜಯರಾಜ್ ಮತ್ತು ಅವರ ಮಗ ಬೆನ್ನಿಕ್ಸ್ ಅವರನ್ನು ಕರೋನ ಲಾಕ್‌ಡೌನ್ ಸಮಯದಲ್ಲಿ ನಿಗದಿತ ಸಮಯಕ್ಕಿಂತ ಹೆಚ್ಚು ಕಾಲ ತಮ್ಮ ಮೊಬೈಲ್ ಅಂಗಡಿಯನ್ನು ತೆರೆದಿಟ್ಟ ಆರೋಪದ ಮೇಲೆ ಪೊಲೀಸರು ಬಂಧಿಸಿದರು. ಠಾಣೆಗೆ ಕರೆದೊಯ್ದ ನಂತರ, ಪೊಲೀಸರು ರಾತ್ರಿಯಿಡೀ ಅವರನ್ನು ಕ್ರೂರವಾಗಿ ಥಳಿಸಿದರು. ಅವರ ಮೇಲೆ ವಿವೇಚನೆಯಿಲ್ಲದೆ ಕೋಲುಗಳು ಮತ್ತು ಕಬ್ಬಿಣದ ರಾಡ್ ಗಳಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಲಾಯಿತು. ನಂತರ, ಅವರನ್ನು ಕೋವಿಲ್ಪಟ್ಟಿ ಸಬ್-ಜೈಲಿಗೆ ಕರೆದೊಯ್ಯಲಾಯಿತು, ಅಲ್ಲಿ ತಂದೆ ಮತ್ತು ಮಗ ಇಬ್ಬರೂ ಗಂಭೀರ ಗಾಯಗಳಿಂದ ಸಾವನ್ನಪ್ಪಿದರು,

ಈ ಘಟನೆಯಿಂದ ದೇಶಾದ್ಯಂತ ಪ್ರತಿಭಟನೆಗಳು ನಡೆದವು, ಬಳಿಕ ಈ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಮಗ್ರ ತನಿಖೆ ನಡೆಸಿ 2,427 ಪುಟಗಳ ಚಾರ್ಜ್‌ಶೀಟ್ ಅನ್ನು ಮಧುರೈ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಅದರ ಆಧಾರದ ಮೇಲೆ ತಂದೆ-ಮಗನ ಲಾಕಪ್ ಡೆತ್ ಪ್ರಕರಣದಲ್ಲಿ ಬಂಧಿತರಾದ ಎಲ್ಲಾ 9 ಪೊಲೀಸರು ತಪ್ಪಿತಸ್ಥರೆಂದು ಕೋರ್ಟ್ ಘೋಷಿಸಿತ್ತು. ಇಂದು ಅವರ ಶಿಕ್ಷೆಯ ಪ್ರಮಾಣ ಪ್ರಕಟವಾಗಿದ್ದು, ಎಲ್ಲಾ ಆರೋಪಿಗಳಿಗೂ ಗಲ್ಲು ಶಿಕ್ಷೆ ವಿಧಿಸಲಾಗಿದೆ.

ಗಲ್ಲು ಶಿಕ್ಷೆಗೊಳಗಾದವರಲ್ಲಿ ಇನ್ಸ್‌ಪೆಕ್ಟರ್ ಎಸ್. ಶ್ರೀಧರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಪಿ. ರಘು ಗಣೇಶ್ ಮತ್ತು ಕೆ. ಬಾಲಕೃಷ್ಣನ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಎಸ್.ಮುರುಗನ್ ಮತ್ತು ಎ. ಸಮದುರೈ, ಕಾನ್‌ಸ್ಟೆಬಲ್‌ಗಳಾದ ಎಂ.ಮುತ್ತುರಾಜ್, ಎಸ್. ಚೆಲ್ಲಾದುರೈ, ಎಕ್ಸ್. ಥಾಮಸ್ ಫ್ರಾನ್ಸಿಸ್ ಮತ್ತು ಎಸ್. ವೇಲುಮುತ್ತು ಸೇರಿದ್ದಾರೆ. ಹತ್ತನೇ ಆರೋಪಿಯಾದ ವಿಶೇಷ ಸಬ್ ಇನ್ಸ್‌ಪೆಕ್ಟರ್ ಪೌಲ್ದುರೈ, ವಿಚಾರಣೆಯ ಸಮಯದಲ್ಲಿ ಕೊವಿಡ್-19ನಿಂದ ನಿಧನರಾಗಿದ್ದರು, ಶಿಕ್ಷೆಯ ಜೊತೆಗೆ ಪ್ರಮುಖ ಆರೋಪಿ ಶ್ರೀಧರ್‌ಗೆ 15 ಲಕ್ಷ ರೂ. ದಂಡವನ್ನೂ ವಿಧಿಸಲಾಯಿತು.

Share This Article
Leave a Comment