ಮಂಗಳೂರು ಮಾರ್ಚ್ 31: ಮದುವೆಯಾದ ಕೇವಲ ಒಂದು ತಿಂಗಳಲ್ಲೇ ಪುತ್ತೂರು ತಾಲ್ಲೂಕಿನ ನೆಲ್ಯಾಡಿ ನಿವಾಸಿ, ಉದ್ಯಮಿ ಸುದೀಪ್ ರೈ (31) ಅವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಸ್ಫೋಟಕ ತಿರುವು ಸಿಕ್ಕಿದೆ. ಪತ್ನಿ ಸೌಮ್ಯಾಳ ಸರಣಿ ವಿವಾಹ ಹಾಗೂ ಆಕೆ ನೀಡುತ್ತಿದ್ದ ಎನ್ನಲಾದ ಮಾನಸಿಕ ಕಿರುಕುಳವೇ ಸುದೀಪ್ ಸಾವಿಗೆ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ.


ಸೌಮ್ಯಾಳ ಪರಿಚಯ ಸುದೀಪ್ಗೆ ಸಾಮಾಜಿಕ ಜಾಲತಾಣದ ಮೂಲಕವಾಗಿತ್ತು. ಪೋಷಕರ ವಿರೋಧದ ನಡುವೆಯೂ ಸುದೀಪ್ ಆತುರ ಬಿದ್ದು ಕಳೆದ ಫೆಬ್ರವರಿ 16 ರಂದು ದೇವಸ್ಥಾನದಲ್ಲಿ ಮದುವೆಯಾಗಿ, ಮರುದಿನವೇ ನೋಂದಾಯಿತ ವಿವಾಹವಾಗಿದ್ದರು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಯ ಅಸಲಿ ಮುಖವಾಡ ಕಳಚಿತ್ತು ಎಂದು ಕುಟುಂಬಸ್ಥರು ದೂರಿದ್ದಾರೆ.

ಮದುವೆಯಾದ ಒಂದು ತಿಂಗಳ ಬಳಿಕ ಪತ್ನಿಯ ಕಿರುಕುಳ ತಾಳಲಾರದೆ ಸುದೀಪ್ ನೆಲ್ಯಾಡಿಯ ಪೋಷಕರ ಮನೆಗೆ ಬಂದಿದ್ದರು. ಈ ವಿಷಯ ತಿಳಿದ ಸೌಮ್ಯಾ, ಸ್ಕೂಟರ್ನಲ್ಲೇ 100 ಕಿ.ಮೀ ಪ್ರಯಾಣ ಬೆಳೆಸಿ ನೆಲ್ಯಾಡಿಗೆ ಬಂದು ರಸ್ತೆಯಲ್ಲೇ ಗಲಾಟೆ ಮಾಡಿದ್ದಳು. ಕಾರಿನಲ್ಲಿ ತಾಯಿಯೊಂದಿಗೆ ಹೋಗುತ್ತಿದ್ದ ಸುದೀಪ್ರನ್ನು ಅಡ್ಡಗಟ್ಟಿ, ಗ್ರಾಮಸ್ಥರ ಎದುರೇ ಹೈಡ್ರಾಮಾ ಸೃಷ್ಟಿಸಿ, ಬಲವಂತವಾಗಿ ಸುದೀಪ್ರನ್ನು ತನ್ನೊಂದಿಗೆ ಕರೆದೊಯ್ದಿದ್ದಳು ಎನ್ನಲಾಗಿದೆ.

ಸುದೀಪ್ ಪೋಷಕರ ಪ್ರಕಾರ, ಸೌಮ್ಯಾಗೆ ಇದು ಮೂರನೇ ಮದುವೆ ಎಂಬ ವಿಷಯ ಅವರಿಗೆ ತಿಳಿದಿರಲಿಲ್ಲ. “ಮಾರ್ಚ್ 22 ರಂದು ಮಗ ಆಸ್ಪತ್ರೆಯಲ್ಲಿದ್ದಾನೆ ಎಂಬ ಮಾಹಿತಿ ಸಿಕ್ಕಿತು. ಅಲ್ಲಿ ಹೋದಾಗ ಫುಡ್ ಪಾಯಿಸನ್ ಅಥವಾ ಕಾಮಾಲೆ ಎಂದು ಕಥೆ ಹೇಳಿದರು. ಆಕೆಯೇ ಮಗನಿಗೆ ವಿಷವಿಕ್ಕಿ ಕೊಂದಿರಬಹುದು ಎಂಬ ಸಂಶಯ ನಮಗಿದೆ,” ಎಂದು ಸುದೀಪ್ ಪೋಷಕರು ಕಣ್ಣೀರು ಹಾಕುತ್ತಾ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ.

ಸೌಮ್ಯಾಳ ವಿಷವರ್ತುಲದಿಂದ ತಪ್ಪಿಸಿಕೊಂಡಿದ್ದ ಕಲಾವಿದ ವೇಣು ಶೆಟ್ಟಿ ಎಂಬುವವರು ಕೂಡ ಆಕೆಯ ಕ್ರೌರ್ಯದ ಬಗ್ಗೆ ಬಾಯಿಬಿಟ್ಟಿದ್ದಾರೆ. “ಆಕೆಯ ಕಿರುಕುಳಕ್ಕೆ ಬೇಸತ್ತು ನಾನು ಊರನ್ನೇ ಬಿಟ್ಟಿದ್ದೆ. ಆಕೆಯ ಕಾಟದಿಂದಾಗಿ ನಾನು ಮದುವೆಯೇ ಬೇಡ ಎಂದು ನಿರ್ಧರಿಸಿದ್ದೇನೆ,” ಎಂದು ಸೌಮ್ಯಾಳ ಪೂರ್ವಾಪರಗಳನ್ನು ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ಹಿಂದಿನ ಅಸಲಿ ಸತ್ಯ ಹೊರಬರಬೇಕಿದೆ.


