ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾಂಗ್ರೇಸ್ ಪಕ್ಷದ ರಾಜಕೀಯ ಕಾರ್ಯಕ್ರಮ ಆಯೋಜನೆಯಿಂದ ಭಕ್ತರ ಭಾವನೆಗಳಿಗೆ ಧಕ್ಕೆ – ದ.ಕ ಜಿಲ್ಲಾ ಬಿಜೆಪಿ

Prakhara News
1 Min Read

ಮಂಗಳೂರು : ಪುತ್ತೂರಿನ ಐತಿಹಾಸಿಕ ಹಾಗೂ ಪವಿತ್ರ ಕ್ಷೇತ್ರವಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಶತಮಾನಗಳ ಕಾಲ ಭಕ್ತರ ನಂಬಿಕೆಯ ಕೇಂದ್ರವಾಗಿದೆ. ಆದರೆ ಇತ್ತೀಚೆಗೆ ದೇವಸ್ಥಾನದ ಸಭಾಭವನವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಂಡಿರುವುದು ಮತ್ತು ಅದರ ಬ್ಯಾನರ್‌ಗಳು ದೇವಸ್ಥಾನದ ವೇದಿಕೆಯಲ್ಲಿ ಇನ್ನೂ ಪ್ರದರ್ಶಿತವಾಗಿರುವುದು ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳು ಮಾಡುವ ದುಃಖಕರ ಘಟನೆಯಾಗಿದೆ.

ದೇವಸ್ಥಾನದ ಸಭಾಭವನದಲ್ಲಿ ನಡೆದ “ಮಹಿಳಾ ಸಂಭ್ರಮ” ಎಂಬ ಕಾರ್ಯಕ್ರಮದ ಬ್ಯಾನರ್‌ಗಳಲ್ಲಿ ಸ್ಪಷ್ಟವಾಗಿ ಕಾಂಗ್ರೇಸ್ ನ ರಾಜಕೀಯ ವ್ಯಕ್ತಿಗಳ ಚಿತ್ರಗಳು ಮತ್ತು ಪ್ರಚಾರದ ಅಂಶಗಳು ಕಾಣಿಸುತ್ತಿವೆ. ದೇವಸ್ಥಾನದ ಆವರಣವನ್ನು ರಾಜಕೀಯ ವೇದಿಕೆಯಾಗಿ ಬಳಸುವುದು ಭಕ್ತರ ಭಾವನೆಗಳಿಗೆ ನೇರ ಅವಮಾನವಾಗಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿ ಕಾಯ್ದೆ, 1997 ಪ್ರಕಾರ ದೇವಸ್ಥಾನಗಳ ಆವರಣವನ್ನು ಧಾರ್ಮಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕೆಂಬ ನಿಯಮವಿದ್ದರೂ, ಅದನ್ನು ಉಲ್ಲಂಘಿಸಿರುವುದು ದೇವಸ್ಥಾನದ ಆಡಳಿತ ಮಂಡಳಿಯ ಜವಾಬ್ದಾರಿಯ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ದೇವಸ್ಥಾನದ ಆವರಣದಲ್ಲಿ ರಾಜಕೀಯ ಪ್ರಚಾರಕ್ಕೆ ಅವಕಾಶ ನೀಡಿರುವುದು ಸಂಪೂರ್ಣವಾಗಿ ಅಸ್ವೀಕಾರಾರ್ಹ. ದೇವಸ್ಥಾನಗಳು ದೇವರ ಆರಾಧನೆಗೆ ಮಾತ್ರ ಸೀಮಿತವಾಗಿರಬೇಕು; ಯಾವುದೇ ರಾಜಕೀಯ ಪಕ್ಷದ ಪ್ರಚಾರ ವೇದಿಕೆಯಾಗಬಾರದು.

ದೇವಸ್ಥಾನದ ಆಡಳಿತ ಮಂಡಳಿ ತಕ್ಷಣವೇ ರಾಜಕೀಯ ಬ್ಯಾನರ್‌ಗಳನ್ನು ತೆರವುಗೊಳಿಸಿ, ಮುಂದಿನ ದಿನಗಳಲ್ಲಿ ದೇವಸ್ಥಾನದ ಸಭಾಭವನವನ್ನು ಯಾವುದೇ ರಾಜಕೀಯ ಕಾರ್ಯಕ್ರಮಗಳಿಗೆ ಬಳಸಬಾರದು ಎಂಬುದಾಗಿ ಬಿಜೆಪಿ ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಭಕ್ತರ ಭಾವನೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಾರ್ವಜನಿಕ ಹೋರಾಟ ನಡೆಸಬೇಕಾದ ಪರಿಸ್ಥಿತಿ ಎದುರಾಗಬಹುದು.

Share This Article
Leave a Comment